ಮೂಡಿಗೆರೆ: ತಾಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾಡುಕೋಣ ರೈತನ ಮೇಲೆ ದಾಳಿ ನಡೆಸಿದ್ದು ಸುಮಾರು 60 ವರ್ಷದ ರೈತ ರಾಜು ಎಂಬುವರಿಗೆ ಗಂಭೀರ ಗಾಯವಾಗಿದೆ.
ರಾಜು ಅವರು ತಮ್ಮ ಮನೆಯ ಹತ್ತಿರ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣವು ಹಠಾತ್ ದಾಳಿ ನಡೆಸಿದ್ದು, ಅವರ ಬಲ ತೊಡೆಯ ಭಾಗದಲ್ಲಿ ಗಂಭೀರ ಗಾಯ ಸಂಭವಿಸಿದೆ.
ಗ್ರಾಮಸ್ಥರು ತಕ್ಷಣ ಅವರನ್ನು ಬಣಕಲ್ ಕೃಷ್ಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ, ಗಾಯ ಗಂಭೀರವಾದರೂ ರಾಜು ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.
ಸ್ಥಳೀಯರು ಮತ್ತು ಅರಣ್ಯ ಇಲಾಖೆ ಕಾಡು ಪ್ರಾಣಿಗಳ ದಾಳಿಯ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ
ಘಟನಾ ಸ್ಥಳದಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಸಂಚಾರ ಹೆಚ್ಚಿರುವ ಬಗ್ಗೆ ಗ್ರಾಮಸ್ಥರು ಗಮನಿಸಿದ್ದು ಕೂಡಲೇ ಕಾಡುಕೋಣಗಳನ್ನು ಓಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ
