ಎನ್. ಆರ್. ಪುರ: ಯಾವುದೇ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನಲ್ಲಿ ನಡೆದಿದೆ.

ಆರೋಪಿಗಳಾದ ಅರುಣ್ ಕುಮಾರ್ (31), ಎಸ್. ಶಂಕರ್ (35) ಹಾಗೂ ಲವ (35) ವಿರುದ್ಧ ಪ್ರಕರಣ ದಾಖಲಾಗಿದೆ.
ಮಾರ್ಚ್ 13 (ಶುಕ್ರವಾರ) ನರಸಿಂಹರಾಜಪುರ-ಶಿವಮೊಗ್ಗ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನರಸಿಂಹರಾಜಪುರದಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ KA14C2539 ನಂಬರಿನ ಟಾಟಾ ಏಸ್ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ವಾಹನದ ಹಿಂಭಾಗವನ್ನು ಟಾರ್ಪಲ್ ಹಾಗೂ ಹಲಗೆಯಿಂದ ಮುಚ್ಚಿರುವುದನ್ನು ಪೊಲೀಸರು ತೆರೆಯಿಸಿ ಪರಿಶೀಲಿಸಿದಾಗ ಎರಡು ಜಾನುವಾರುಗಳನ್ನು ಗಾಳಿ-ಬೆಳಕು ಇಲ್ಲದಂತೆ, ಹುಲ್ಲು-ನೀರು ನೀಡದೆ ಹಿಂಸಾತ್ಮಕ ರೀತಿಯಲ್ಲಿ ತುಂಬಿಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಎನ್. ಆರ್. ಪುರ ಪೊಲೀಸರು ಜಾನುವಾರುಗಳು ಹಾಗೂ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
