ಚಿಕ್ಕಮಗಳೂರು : ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.
ಸ್ಟೇಡಿಯಂ ಬಾಯ್ಸ್ ಕ್ಲಬ್ ವತಿಯಿಂದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿಗೆ ಜಿಪಂ ಮಾಜಿ ಅಧ್ಯಕ್ಷ ಮಹೇಶ್ ಹಾಗೂ ಇತರರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಗಣ್ಯರು, ಕ್ರೀಡಾ ದಿನಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡರು. ಜತೆಗೆ ಪಂದ್ಯಾವಳಿಗೆ ಶುಭ ಕೋರಿದರು.
ಕ್ಲಬ್ ಅಧ್ಯಕ್ಷ ಶರತ್ ಮಾತನಾಡಿ, ಮೊದಲ ಬಾರಿಗೆ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ರಾಜ್ಯದ ವಿವಿದೆಡೆಯ 30 ತಂಡಗಳು ಪಾಲ್ಗೊಂಡಿವೆ. ವಿಜೇತರಿಗೆ ಬಹುಮಾನವಾಗಿ ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ ಎಂದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವಿನುತ ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಸಪ್ತಾಹದ ರೀತಿ ಆಚರಿಸಲಾಗುತ್ತಿದೆ. ಒಂದು ವಾರ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಸದಸ್ಯ ಗುರುಮಲ್ಲಪ್ಪ, ಮಾಜಿ ಸದಸ್ಯ ನಟರಾಜ್, ಟೊಮ್ಯಾಟೊ ವ್ಯಾಪಾರಿ ಭದ್ರ ಮುಂತಾದವರು ವೇದಿಕೆಯಲ್ಲಿದ್ದರು.


