ಹಾಸನ: ಮದುವೆಯಾದ ಕೇವಲ ಆರೇ ತಿಂಗಳಲ್ಲಿ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಮೃತಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಿದ್ಯಾ ಎನ್ನಲಾಗಿದ್ದು, ಸೋಮಲಾಪುರ ಗ್ರಾಮದ ಶಿವು ಎಂಬುವವರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿ ಇದ್ದರು
ಮದುವೆಯಾದ ಆರಂಭದಿಂದಲೂ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಇದೀಗ ಮಗಳನ್ನು ಅವರೇ ಹತ್ಯೆ ಮಾಡಿದ್ದಾರೆ ಎಂದು ಮೃತ ವಿದ್ಯಾಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಮಂಗಳವಾರ ಸಂಜೆ ಅರಸೀಕೆರೆ ರೈಲ್ವೆ ಟ್ರ್ಯಾಕ್ ಬಳಿ ವಿದ್ಯಾ ಶವವಾಗಿ ಪತ್ತೆಯಾಗಿದ್ದಾರೆ.
ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತಿ ಮನೆಯವರ ವಿಚಾರಣೆ ನಡೆಸುತ್ತಿದ್ದು ಇನ್ನೂ ಸಾವಿಗೆ ಕಾರಣ ನಿಖರವಾಗಿ ತಿಳಿದುಬಂದಿಲ್ಲ.
