ಎನ್ ಆರ್ ಪುರ: ಶ್ರೀಮಂತಿಕೆ ಎನ್ನುವುದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಾಗ ಮಾತ್ರ ಅದರ ನಿಜವಾದ ಮೌಲ್ಯ ಬೆಳಗುತ್ತದೆ ಎಂದು ಎನ್ ಆರ್ ಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪಿ.ಜೆ. ಆಂಟೋನಿ ತಿಳಿಸಿದ್ದಾರೆ.
ದಿನಾಂಕ 27.03.2026ರಂದು ಹೊಡೆಯಾಲದ ಶ್ರೀರಾಮ ದೇವಸ್ಥಾನದಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಆಯೋಜಿಸಲಾದ 33ನೇ ಆರೋಗ್ಯ ಶಿಬಿರದ ಅಂಗವಾಗಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮ್ಮ ಫೌಂಡೇಶನ್ ಕಳೆದ ಆರು ವರ್ಷಗಳಿಂದ ಕ್ಷೇತ್ರದ ಪ್ರತಿ ಹಳ್ಳಿ ಹಾಗೂ ಪ್ರತಿಯೊಂದು ಗ್ರಾಮಗಳ ಮನೆಮನೆಗೂ ತಲುಪಿದ್ದು, ಬಡವರು, ದಲಿತರು, ರೈತರು ಮತ್ತು ಕೂಲಿ ಕಾರ್ಮಿಕರಿಗೆ ಅವಶ್ಯಕತೆಯ ಸಮಯದಲ್ಲಿ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ತಿಳಿಸಿದರು. ವಿಶೇಷವಾಗಿ ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿನ ಕೂಲಿ ಕಾರ್ಮಿಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅಂತಹ ಸಂದರ್ಭಗಳಲ್ಲಿ “ನಿಮ್ಮೊಂದಿಗೆ ನಾನಿದ್ದೇನೆ” ಎಂಬ ಭರವಸೆ ನೀಡುವ ಸಂಸ್ಥೆಯ ಅಗತ್ಯವಿದೆ. ಆ ದೃಷ್ಟಿಯಿಂದ ಅಮ್ಮ ಫೌಂಡೇಶನ್ ಮಹತ್ತರ ಸೇವೆ ಸಲ್ಲಿಸುತ್ತಿದೆ ಎಂದರು.

ಶೃಂಗೇರಿ ಕ್ಷೆತ್ರದಲ್ಲಿ ಮಾನವೀಯತೆ ಮೆರೆಯುತ್ತಿರುವ ಸುಧಾಕರ್ ಶೆಟ್ಟಿ ಯವರು ಇದುವರೆಗೆ ಸಂಸ್ಥೆ ಸುಮಾರು 75 ವೀಲ್ಚೇರ್ಗಳನ್ನು ವಿತರಿಸಿದ್ದು, 3000 ಜನರಿಗೆ ಉಚಿತ ಕನ್ನಡಕಗಳನ್ನು ನೀಡಿದೆ. ಅಲ್ಲದೆ, 250 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ, ಸುಮಾರು 2000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ ಎಂದು ಹೇಳಿದರು. ಇಂತಹ ಸೇವಾ ಮನೋಭಾವವನ್ನು ಇತರ ಸಂಘ-ಸಂಸ್ಥೆಗಳೂ ಅಳವಡಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.

ಮನುಷ್ಯನು ಗಳಿಸಿದ ಸಂಪತ್ತನ್ನು ಕೇವಲ ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಮಾತ್ರ ಉಳಿಸಿ ಹೋಗುವುದರಿಂದ ಜೀವನದ ಮೌಲ್ಯ ಹೆಚ್ಚುವುದಿಲ್ಲ. ಆದರೆ ಸಮಾಜಕ್ಕೆ ನೀಡಿದ ಕೊಡುಗೆ ಮಾತ್ರ ಶಾಶ್ವತವಾಗಿ ಉಳಿದು, ಜನಮನಗಳಲ್ಲಿ ನಮ್ಮನ್ನು ನೆನಪಿಸುತ್ತದೆ. ಆದ್ದರಿಂದ ಶ್ರೀಮಂತ ಉದ್ಯಮಿಗಳು ತಮ್ಮ ಆದಾಯದಲ್ಲಿ ಕನಿಷ್ಠ ಒಂದು ಭಾಗವನ್ನಾದರೂ ಸಮಾಜದ ಹಿತಕ್ಕಾಗಿ ಮೀಸಲಿಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಹಿರಿಯ ಉದ್ಯಮಿ ಹಾಗೂ ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಪಿ.ಜೆ. ಆಂಟೋನಿ ಅವರು ಕರೆ ನೀಡಿದರು.
ಹಣದ ಆಸೆ ಮನುಷ್ಯನ ಸ್ವಭಾವವಾದರೂ, ಬಡವರು, ಕೂಲಿ ಕಾರ್ಮಿಕರು ಹಾಗೂ ದಲಿತರಿಗೆ ನೀಡುವ ಸಹಾಯವೇ ನಿಜವಾದ ಧರ್ಮಕಾರ್ಯ. ಇಂತಹ ಪುಣ್ಯ ಕಾರ್ಯಗಳಿಂದ ಭಗವಂತನು ಕೂಡ ಸಂತೋಷಪಟ್ಟು ನಿಮ್ಮ ಜೀವನದಲ್ಲಿ ಒಳ್ಳೆಯದನ್ನು ನೀಡುತ್ತಾನೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಅವರು ಇದೇ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿ, ಬಡವರ ಜೀವನದಲ್ಲಿ ಬೆಳಕು ಮೂಡಿಸುವ ಸೇವೆಯನ್ನು ನಿರಂತರವಾಗಿ ಮಾಡಲಿ ಎಂದು ಅವರು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಎನ್.ಆರ್.ಪುರ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ವಿನಯ್ ಕಣಿವೆ, ಕೃಷಿಕರಾದ ಪ್ರಫುಲ್ಲ ಕೆ, ಮುತ್ತಿನಕೊಪ್ಪ ಪ್ರಫುಲ್ಲಚಂದ್ರ, ಅಮ್ಮ ಫೌಂಡೇಶನ್ ಯೋಜನಾಧಿಕಾರಿ ವೆಂಕಪ್ಪ ಆಚಾರ್, ನಿರ್ದೇಶಕರಾದ ಪ್ರಭಾಕರ್ ಶೆಟ್ಟಿ, ರಮೇಶ್ ಶೆಟ್ಟಿ, ರವಿಕುಮಾರ್ ಕೆ, ಪ್ರಕಾಶ್ ಹೊಡೆಯಾಲ, ಅಭಿನವ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೌಶಿಕ್ ಗೌಡ ಸ್ವಾಗತಿಸಿ, ಗುರುಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು.
