ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಕಾರಿ ಪ್ರಕರಣದಲ್ಲಿ ಬಿಜೆಪಿ ಮುಖಂಡನನ್ನು ಅರೆಸ್ಟ್ ಮಾಡಿದ್ದಕ್ಕೆ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದ್ದಕ್ಕೆ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಅದರ ಬೆನ್ನಲ್ಲೇ ಬಿಜೆಪಿ ಮುಖಂಡನ ಬಂಧನ ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನಾ ಸಭೆ ಮಾಡಿದ್ದಲ್ಲದೇ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಮತ್ತೊಂದು ಎಫ್ ಐ ಆರ್ ದಾಖಲಾಗಿತ್ತು. ಈ ಎರಡೂ ಪ್ರಕರಣಗಳೂ ಕೂಡ ಜಾಮೀನು ರಹಿತ ಪ್ರಕರಣಗಳಾಗಿದ್ದು ಇದೀಗ ಅವರ ಬಂಧನಕ್ಕೆ ಅವರ ನಿವಾಸಕ್ಕೆ ಪೊಲೀಸರು ಆಗಮಿಸಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪೂರ್ ಮಠ್ ಮತ್ತು ಪಿಎಸ್ಐ ಚಂದ್ರಶೇಖರ್ ಪೂಂಜ ಮನೆಗೆ ಆಗಮಿಸಿದ್ದಾರೆ.

ಪೂಂಜ ಬಂಧನಕ್ಕೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲ ನಿವಾಸ ಮುಂದೆ ಪೊಲೀಸ್ ತಂಡ ಸಜ್ಜಾಗಿದೆ. ಯಾವುದೇ ಸಮಯದಲ್ಲೂ ಹರೀಶ್ ಪೂಂಜ ಬಂಧನದ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆ ಅವರ ಮನೆಗೆ ಸಾರ್ವಜನಿಕ ಭೇಟಿಗೆ ಪೊಲೀಸರು ನಿರಾಕರಿಸಿದ್ದು, ಮನೆಗೆ ಹೋಗುವ ರಸ್ತೆಗೆ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ವಿಚಾರ ತಿಳಿದು ಅವರ ಮನೆ ಮುಂದೆ ಕಾರ್ಯಕರ್ತರು ಜಮಾಯಿಸಲಾರಂಭಿಸಿದ್ದಾರೆ.ಇನ್ನು ಪೂಂಜ ನಿವಾಸಕ್ಕೆ ವಕೀಲರು ಭೇಟಿ ಕೊಟ್ಟಿದ್ದರು ಪೂಂಜ ಜೊತೆ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಕೂಡ ಆಗಮಿಸಿದ್ದಾರೆ.
