ಹಾಸನ: ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವವನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹಾಗೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಬರುವ ಭಕ್ತರ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಅಧಿಕಾರಿಗಳಿಗೆ ಸೂಚನೆ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಅರ್ಚಕರಿಂದ ಮಾಹಿತಿ ಪಡೆದು ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಹೆಚ್ಚಿನ ಸಮಯ ಒದಗಿಸಲು ಅವಕಾಶ ಮಾಡಿಕೊಡಬೇಕು. ಅಂದಾಜು ಒಂದು ದಿನಕ್ಕೆ ಎಷ್ಟು ಭಕ್ತರು ಬರುತ್ತಾರೆ ಎಂಬುದನ್ನು ಪರಿಗಣಿಸಿ ಅಗತ್ಯ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕುಡಿಯುವ ನೀರು, ಸಾರ್ವಜನಿಕರ ಶೌಚಾಲಯ ನಿರ್ವಹಣೆ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸಮವಸ್ತ್ರ ಧರಿಸಿರಬೇಕು. ಸ್ವಚ್ಛತೆ ಸಂದರ್ಭದಲ್ಲಿ ಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಬಳಸುವಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗೆ ಮೂರು ಬ್ಯಾಚ್ ಮಾಡಿ, ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶ ನೀಡಿದರು.
ತಾಂತ್ರಿಕತೆಯನ್ನು ಬಳಸಿಕೊಂಡು ಕಡಿಮೆ ಸ್ಥಳದಲ್ಲಿಉತ್ತಮ ರೀತಿಯಲ್ಲಿಅಲಂಕಾರಕ್ಕೆ ಒತ್ತು ನೀಡಬೇಕು. ಟೆಂಡರ್ ಡಾಕ್ಯುಮೆಂಟ್ ಅನ್ನು ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಪರಿಶೀಲನೆ ಮಾಡಬೇಕು. ಸುರಕ್ಷತೆ ಬಹಳ ಮುಖ್ಯ. ಆ ಕಾರಣಕ್ಕೆ ಯಾವುದೇ ನ್ಯೂನ್ಯತೆಗಳು ಆಗದಂತೆ ಎಚ್ಚರಿಕೆವಹಿಸಿ ಎಂದು ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.
ಹಾಗೆ ಹಾಸನಾಂಬ ದೇವಿಯ ದರ್ಶನ ಎಲ್ಲಭಕ್ತರಿಗೂ ಸುಗಮವಾಗಿ ಸಿಗಲೆಂಬ ಉದ್ದೇಶಕ್ಕಾಗಿ ವಿಐಪಿ ದರ್ಶನ, ಶಿಷ್ಟಾಚಾರ ದರ್ಶನ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಬೇಕು. ಉಳಿದ ದಿನಗಳಲ್ಲಿಕಡ್ಡಾಯವಾಗಿ ವಿಐಪಿ ದರ್ಶನ ನಿಷೇಧಿಸಬೇಕು ಜಾತ್ರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಎನ್.ರಮೇಶ್ ಎಂದು ಮನವಿ ಮಾಡಿದರು.
ಈ ವೇಳೆ ಎಸ್‌ಪಿ ಮೊಹಮ್ಮದ್ ಸುಜೀತಾ, ಎಎಸ್‌ಪಿ ತಮ್ಮಯ್ಯ, ವೆಂಕಟೇಶ್ ನಾಯ್ಡು, ದೇವಾಲಯ ಆಡಳಿತಾಧಿಕಾರಿ ಮಾರುತಿ, ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.