ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಒಂದಿಲ್ಲೊಂದು ಅನಾಹುತ ಸಂಭವಿಸುತ್ತಲೇ ಇದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಇನ್ನು ಭಾರೀ ಗಾಳಿ ಮಳೆಗೆ ಮನೆ ಮೇಲೆ ಬೃಹತ್ ಮರವೊಂದು ಬಿದ್ದು ಮನೆ ಸಂಪೂರ್ಣ ಜಖಂಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಕಗ್ಗನಹಳ್ಳ ಗ್ರಾಮದಲ್ಲಿ ನಡೆದಿದೆ.
ಗಿರಿಜಾ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಘಟನೆ ಸಂಭವಿಸಿದೆ. ಬೃಹತ್ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣ ನಾಶವಾಗಿದೆ. ಆದ್ರೆ ಮನೆಯಲ್ಲಿ ಮಲಗಿದ್ದ ಐವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬೀಳುತ್ತಿರುವ ಸದ್ದು ಕೇಳ್ತಿದ್ದಂತೆ ಎಚ್ಚೆರಗೊಂಡು ಹೊರಬಂದಿದ್ದು, ಐವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಇನ್ನು ಕೂಲಿ ಮಾಡಿ ಜೀವನ ಮಾಡುತ್ತಿದ್ದ ಬಡ ಕುಟುಂಬ ಇದೀಗ ಘಟನೆಯಿಂದ ಕಂಗಾಲಾಗಿದ್ದಾರೆ. ಇದ್ದೊಂದು ಮನೆಯೂ ಮಣ್ಣುಪಾಲಾಯ್ತು. ಮುಂದೆ ನಮ್ಮ ಕಥೆ ಏನೆಂದು ಚಿಂತೆಗೀಡಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಬಡ ಕುಟುಂಬಕ್ಕೆ ಪರಿಹಾರ ನೀಡ್ಬೇಕೆಂದು ಆಗ್ರಹಿಸಿದ್ದಾರೆ