ಬೆಂಗಳೂರು: ಕೆ.ಆರ್.ನಗರದ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರಿಗೆ 7 ದಿನಗಳ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ನ್ಯಾಯಾಲಯದಲ್ಲಿ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳ ವಿರುದ್ಧ, ಆರೋಪಗಳ ಸುರಿಮಳೆಗೈದಿದ್ದಾರೆ .ಎಸ್ಐಟಿ ಅಧಿಕಾರಿಗಳು ನನಗೆ ಕಳೆದ 3 ದಿನಗಳಿಂದ ನಿದ್ದೆ ಮಾಡಲು ಬಿಟ್ಟಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದ್ದರು, ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ. ಮಹಿಳೆಯ ಕಿಡ್ನಾಪ್ ಪ್ರಕರಣದ ಬಗ್ಗೆ ನನಗೆ ಏನು ಗೊತ್ತಿಲ್ಲ. ನನಗೆ ಈ ಕೇಸಲ್ಲಿ ಸಿಲುಕಿಸುತ್ತಾ ಇದಾರೆ. ಇವತ್ತು ಕೂಡಾ ನನಗೆ 2 ಗಂಟೆ ವಿಚಾರಣೆ ಮಾಡಿದ್ದಾರೆ.ನಾನು ಯಾವುದೇ ತಪ್ಪು ಮಾಡಿಲ್ಲ.ಹಾಗಿದ್ದರೂ ತಪ್ಪುಗಳನ್ನ ಒಪ್ಪಿಕೊ ಅಂತ ಎಸ್ಐಟಿ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾನೇನು ತಪ್ಪು ಮಾಡಿಲ್ಲ.ನನಗೆ gastric (ಹೊಟ್ಟೆ ಉರಿ) ಸಮಸ್ಯೆ ಜಾಸ್ತಿಯಾಗಿತ್ತು, ಆದರೂ ನನಗೆ ಆಸ್ಪತ್ರೆಗೆ ಸೇರಿಸಲಿಲ್ಲ. ರಾಜಕೀಯ ಷಡ್ಯಂತ್ರ ಮಾಡಿ ನನಗೆ ಬಂಧಿಸಿದ್ದಾರೆ ಅಂತ ನ್ಯಾಯಾಧೀಶರ ಮುಂದೆ ರೇವಣ್ಣ ಆರೋಪ ಮಾಡಿದ್ದಾರೆ.
ನಾನು ಕಳೆದ 30 ವರ್ಷದಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಇಷ್ಟು ವರ್ಷದಲ್ಲಿ ನನ್ನ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈ ಪ್ರಕರಣಕ್ಕೂ ನನಗು ಯಾವುದೇ ಸಂಬಂಧ ಇಲ್ಲ ಅಂತ ನ್ಯಾಯಾಧೀಶರ ಮುಂದೆ ರೇವಣ್ಣ ಅಳಲು ತೋಡಿಕೊಂಡರು.
ಜಾಮೀನು ಅರ್ಜಿಯ ವಿಚಾರಣೆ
ನಿನ್ನೆ(ಮೇ 7ಕ್ಕೆ) ನ್ಯಾಯಾಲಯ, ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿರುವಾಗ ಜಾಮೀನು ಅರ್ಜಿಯ ವಿಚಾರಣೆ ಮಾಡಬಹುದೇ ? ಜಾಮೀನು ನೀಡಿದರೆ ಪೊಲೀಸ್ ಕಸ್ಟಡಿಯನ್ನು ಹೇಗೆ ಮುಂದುವರಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ರೇವಣ್ಣ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿರುವ ಕಾನೂನಿನ ಅಂಶಗಳನ್ನು ಹಾಗು ಸುಪ್ರೀಂ ಕೋರ್ಟ್ ನ ಕೆಲವು ತೀರ್ಪಿನ ನಿದರ್ಶನಗಳನ್ನ ನೀಡಿ, ಜಾಮೀನು ನೀಡಬಹುದು ಅಂತ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದಕ್ಕೆ ಎಸ್ಐಟಿ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸುವಂತೆ ಎಸ್ಐಟಿ ಗೆ ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ಇವತ್ತಿಗೆ (ಮೇ 8ಕ್ಕೆ ) ಮುಂದೂಡಿತ್ತು.
ಇವತ್ತು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ರೇವಣ್ಣ ಅವರಿಗೆ 7 ದಿನಗಳ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಈ ವೇಳೆ ರೇವಣ್ಣ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿದ ಜಾಮೀನಿಗೆ ಮನವಿ ಮಾಡಿದರು. ಆದರೆ ನ್ಯಾಯಾಧೀಶರು ಇವರ ಮನವಿಯನ್ನ ತಿರಸ್ಕರಿಸಿದ್ದು, ಮೇ 14 ರ ವರೆಗೆ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.