ಹಾಸನ: ಸೆಕ್ಸ್ ಸ್ಕ್ಯಾಂಡಲ್ ಮೂಲಕ ಭಾರೀ ಸುದ್ದಿಯಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲೈಂಗಿಕ ದೌರ್ಜನ್ಯ ಆರೋಪದಡಿ ಹೆಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದ್ದು, ಸರ್ಕಾರ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡಿದೆ. ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ ಅಪ್ಪ ಮಗನ ರಾಸಲೀಲೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ಸಂಕಷ್ಟದಿಂದ ಪಾರಾಗಲು ರೇವಣ್ಣ ಕುಟುಂಬದ ದೇವರ ಮೊರೆ ಹೋಗಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ರೇವಣ್ಣ ನಿವಾಸದಲ್ಲಿ ಭಾರೀ ಹೋಮ ಹವನ ನಡೆದಿದೆ. ಮನೆಯಲ್ಲಿ ಅಗ್ನಿಕುಂಡ ನಿರ್ಮಿಸಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಇವತ್ತು ಬೆಳ್ಳಂಬೆಳಿಗ್ಗೆಯೇ ರೇವಣ್ಣ ಹಾಸನ ದೇಗುಲಕ್ಕೆ ತೆರಳಿ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ನಂತರ ಮನೆಯಲ್ಲಿ ಹೋಮ ಹವನ ನೆರವೇರಿಸಿ ಬೆಂಗಳೂರಿಗೆ ಹೊರಟಿದ್ದಾರೆ ಎನ್ನಲಾಗಿದೆ. ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಎಚ್‌ಡಿ ರೇವಣ್ಣ ಎ1 ಆರೋಪಿಯಾಗಿದ್ದು, ಪ್ರಜ್ವಲ್ ರೇವಣ್ಣ ಎ2 ಆರೋಪಿ ಆಗಿದ್ದಾರೆ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ 354 A, 354 D, 509 ಅಡಿ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗೊಂಡಿದೆ.