ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ದಾಟುತ್ತಿದ್ದ ಯುವಕನಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡ ಯುವಕನನ್ನು ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಬಾಳ್ಳುಪೇಟೆ ಬಳಿ ದಿನೇಶ್ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಯುವಕ ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾನೆ.

ಅಪಘಾತಕ್ಕೀಡಾದ ಕಾರು ಬೆಂಗಳೂರು ಮೂಲದಾಗಿದೆ ಕಾರಿನಲ್ಲಿ ವಕೀಲರ ಕುಟುಂಬವು ಬೆಂಗಳೂರಿನಿಂದ ಕುಂದಾಪುರದ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದು ದೃಶ್ಯದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಸ್ಥಳೀಯರು ತಕ್ಷಣವೇ ಗಾಯಾಳುವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಯುವಕನ ಸ್ಥಿತಿ ಗಂಭೀರವಾಗಿದೆ ಮತ್ತು ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
