ಸಕಲೇಶಪುರ: ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಸವಾರ್ಕರ್‌ರಂತಹ ಕ್ರಾಂತಿಕಾರಿಗಳ ಪಾತ್ರವು ದೊಡ್ಡದಾಗಿದೆ ಎಂದು ಹಿಂದೂ ಹಿತ ರಕ್ಷಣಾ ಸಮಿತಿಯ ರಾಜ್ಯ ಮುಖಂಡ ರಘು ಸಕಲೇಶಪುರದಲ್ಲಿ ಹೇಳಿದರು.

ಪಟ್ಟಣದಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆ ವತಿಯಿಂದ ಹಳೆ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಯವರು ಬರಬೇಕಾಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಒತ್ತಡದಿಂದ ಪುನೀತ್ ಕೆರೆಹಳ್ಳಿಯವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಖಂಡನೀಯ ಎಂದು ಹೇಳಿದರು. ಆದರೂ ಸಹ ನೂರಾರು ಯುವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.

1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಆದರೆ ದೇಶ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಎಂದು ಮೂರು ತುಂಡಾಯಿತು. ಆಗಸ್ಟ್ 14ರ ಮಧ್ಯರಾತ್ರಿ ದೇಶದ ಲಕ್ಷಾಂತರ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯಿತು, ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಆದರೆ ಇಂತಹ ಕರಾಳ ರಾತ್ರಿಯನ್ನು ನಾವು ನೆನಪಿಸಿಕೊಳ್ಳುವ ಬದಲು ಪ್ರತಿವರ್ಷ ಆಗಸ್ಟ್ 15ರಂದು ಸಂಭ್ರಮಾಚರಣೆಯಲ್ಲಿ ಮುಳುಗುತ್ತೇವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ದೇಶ ವಿಭಜನೆಯ ದುರಂತ ಕಥೆಯನ್ನು ಹೇಳಿಕೊಡಬೇಕು.

ದೇಶಕ್ಕೆ ಸ್ವಾತಂತ್ರ್ಯವನ್ನು ಯಾರು ತಂದುಕೊಟ್ಟರು ಎಂದರೆ ಗಾಂಧೀಜಿ ಹಾಗೂ ನೆಹರು ಎಂದು ಹೇಳಲಾಗುತ್ತದೆ. ಆದರೆ ಇವರಿಬ್ಬರಿಗಿಂತ ಶೇಕಡಾರು ಕ್ರಾಂತಿಕಾರರು ದೇಶಕ್ಕೆ ಸ್ವಾತಂತ್ರ್ಯ ತರಲು ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಅದಕ್ಕಾಗಿ ಮಕ್ಕಳಿಗೆ ನಾವು ನೈಜ ಇತಿಹಾಸವನ್ನು ತಿಳಿಸಬೇಕು. ದೇಶ ವಿಭಜನೆಯಾದರೆ ದೇಶದಲ್ಲಿರುವ ಎಲ್ಲಾ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಬೇಕು, ಅಲ್ಲಿರುವ ಎಲ್ಲಾ ಹಿಂದೂಗಳು ಭಾರತಕ್ಕೆ ಬರಬೇಕು ಎಂದು ಸಂವಿಧಾನದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಆದರೆ ಅಂಬೇಡ್ಕರ್ ಅವರ ಮಾತಿಗೆ ಬೆಲೆ ಕೊಡದೆ ಜಾತ್ಯಾತೀತ ದೇಶವನ್ನಾಗಿ ಮಾಡಲಾಗಿದೆ.
ಇಂದಿಗೂ ದೇಶದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು, ಹಿಂದೂಗಳ ನಂಬಿಕೆಗಳ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಧರ್ಮಸ್ಥಳ ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದು, ಆದರೂ ಸಹ ಅನಾಮಿಕ ಎಂಬ ವ್ಯಕ್ತಿಗೆ ಮುಖವಾಡ ಹಾಕಿಸಿ ಎಸ್.ಐ.ಟಿ ತಂಡ ರಚಿಸಿ ತನಿಖೆ ನಡೆಯುತ್ತಿದೆ. ಕೂಡಲೆ ಈ ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಧರ್ಮಸ್ಥಳ ವಿರುದ್ಧದ ಅಪಪ್ರಚಾರ ನಿಲ್ಲಿಸಬೇಕು.
ದತ್ತಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವವರು ಸಕಲೇಶಪುರದ ಕಾರ್ಯಕರ್ತರಾಗಿದ್ದಾರೆ. ಸರ್ಕಾರಕ್ಕೆ ತಾಕತ್ತಿದ್ದರೆ ದತ್ತಪೀಠದಲ್ಲಿರುವ ಗೋರಿಗಳ ಉತ್ಥಾನವನ್ನು ಜಿಪಿಆರ್ ಹಾಗೂ ರಾಡರ್ ಮುಖಾಂತರ ಮಾಡಲಿ. ಕ್ಷೇತ್ರದ ಶಾಸಕರು ಗೆಲುವು ಸಾಧಿಸುವಲ್ಲಿ ಹಿಂದೂ ಕಾರ್ಯಕರ್ತರ ಶ್ರಮ ಹೆಚ್ಚಿದ್ದು, ಇದಕ್ಕೆ ತಕ್ಕಂತೆ ಕ್ಷೇತ್ರದ ಜನರಿಗೆ ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ಸದನದಲ್ಲಿ ಗಟ್ಟಿಧ್ವನಿಯಲ್ಲಿ ಹೊರಹಾಕುತ್ತಿದ್ದು, ಇದರಿಗಾಗಿ ಅವರು ಜನಸಾಮಾನ್ಯರ ಶಾಸಕರಾಗಿ ಹೊರಹೊಮ್ಮಿದ್ದಾರೆ. ಮುಂಬರುವ ರಾಮಧೂತ ಗಣಪತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಹೇಳಿದರು.
ಹಿಂದೂ ಹಿತ ರಕ್ಷಣಾ ವೇದಿಕೆಯ ಮುಖಂಡ ಶಿವುಜಿಪ್ಪಿ ಮಾತನಾಡಿ, ಸಕಲೇಶಪುರದಲ್ಲಿ ಎಲ್ಲಾ ವರ್ಗದವರು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘಟನೆ ವತಿಯಿಂದ ಗೋಹತ್ಯೆ ತಡೆಗೆ, ಲವ್ ಜಿಹಾದ್ ಹಾಗೂ ಲ್ಯಾಂಡ್ ಜಿಹಾದ್ ತಡೆಗೆ ನಿರಂತರವಾಗಿ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಬೇಕಿದ್ದ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಯವರಿಗೆ ನಿರ್ಬಂಧ ಹೇರಿದ್ದರಿಂದ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣದವರೆಗೆ ಮಳೆಯ ನಡುವೆಯೇ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆಯ ಮುಖಂಡರಾದ ಕೌಶಿಕ್ ಹೆನ್ನಲಿ, ಮಂಜು ಕಬ್ಬಿನಗದ್ದೆ, ದಿಲೀಪ್, ದುಷ್ಯಂತ್, ಧರ್ಮೇಶ್, ಶೇಖರ್ ಕಬ್ಬಿನಗದ್ದೆ, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಬಿಜೆಪಿ ಮುಖಂಡರಾದ ಪ್ರತಿಭಾ ಮಂಜನಾಥ್, ಬಬಿತಾ ಅಶ್ವನಾಥ್ ಮತ್ತು ಹಲವರು ಹಾಜರಿದ್ದರು.
