ಹಾಸನ: ಎ.ಆರ್.ಟಿ.ಓ ಸಿಬ್ಬಂದಿಗಳು ಸಾರ್ವಜನಿಕರನ್ನು ಗೌರವದಿಂದ ಮಾತನಾಡಿಸಿದರೆ ಅರ್ಧ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಎಂದು ಭೇಟಿ ನೀಡಿದ್ದರಿಂದ ಎ.ಆರ್.ಟಿ.ಓ ಕಚೇರಿಯ ಸಿಬ್ಬಂದಿಗಳು ಹಾಗೂ ಮಧ್ಯವರ್ತಿಗಳು ತಬ್ಬಿಬ್ಬಾದಾರೆ ಸಾರ್ವಜನಿಕ ವಲಯದಲ್ಲಿ ಸಂತೋಷ ಕಂಡು ಬಂದಿತು. ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾರ್ವಜನಿಕರಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಅವಕಾಶ ನೀಡಿದ್ದರಿಂದ ಹಲವರ ಸಮಸ್ಯೆಗಳು ಸ್ಥಳದಲ್ಲಿಯೆ ಬಗೆಹರಿದರೆ ಇನ್ನು ಹಲವರ ಸಮಸ್ಯೆಗಳು ಶೀಘ್ರದಲ್ಲಿಯೆ ಬಗೆಹರಿಯುವ ನಿರೀಕ್ಷೆಯಿದೆ.

ಬೇಲೂರು ಮೂಲದ ವ್ಯಕ್ತಿಯೋರ್ವರು ದಲ್ಲಾಳಿಯೋರ್ವರಿಗೆ ಕೆಲವು ತಿಂಗಳ ಹಿಂದೆಯೆ ವಾಹನವೊಂದರ ದಾಖಲಾತಿಯನ್ನು ದಲ್ಲಾಳಿಯೋರ್ವರಿಗೆ ನೀಡಿದ್ದು ಅವರು ಆ ದಾಖಲಾತಿಯನ್ನು ಎ.ಆರ್.ಟಿ.ಓ ಕಚೇರಿಗೆ ನೀಡಿದ್ದರು. ಆದರೆ ಎ.ಆರ್.ಟಿ.ಓ ಕಚೇರಿಯಲ್ಲಿ ಕಡತಗಳು ನಾಪತ್ತೆಯಾಗಿರುವುದರಿಂದ ಆ ವ್ಯಕ್ತಿ ಶಾಸಕರ ಮುಂದೆ ಕಣ್ಣೀರು ಹಾಕಿದರು. ಈ ಹಿನ್ನೆಲೆಯಲ್ಲಿ ಶಾಸಕರು ಇನ್ನೆರಡು ದಿನದೊಳಗೆ ಆತನಿಗೆ ದಾಖಲಾತಿ ಮಾಡಿಕೊಡಬೇಕೆಂದು ಆದೇಶಿಸಿದರು

ಇದರಿಂದ ಸಂತೋಷಗೊಂಡ ಆತ ಶಾಸಕರ ಕಾಲಿಗೆ ಬೀಳಲು ಮುಂದಾದ, ತಕ್ಷಣ ಶಾಸಕರು ಆತನನ್ನು ಸಮಾಧಾನಿಸಿದರು. ಇದೇ ಸಂಧರ್ಭದಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಶಾಸಕರಿಗೆ ದೂರು ನೀಡಿ ಎ.ಆರ್.ಟಿ.ಓ ಕಚೇರಿಯಲ್ಲಿ ದಲ್ಲಾಳಿಗಳ ಮೂಲಕ ಬಂದರೆ ಮಾತ್ರ ಕೆಲಸವಾಗುತ್ತದೆ. ನೇರವಾಗಿ ಬಂದರೆ ಕಚೇರಿ ಸಿಬ್ಬಂದಿಗಳು ಸಾರ್ವಜನಿಕರನ್ನು ಅಗೌರವವಾಗಿ ಕಂಡು ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂದು ದೂರಿದರು.
ಈ ಸಂಧರ್ಭದಲ್ಲಿ ಹಲವು ಸಾರ್ವಜನಿಕರ ದೂರುಗಳನ್ನು ಸ್ಥಳದಲ್ಲಿಯೆ ಬಗೆಹರಿಸಿದರು. ಎ.ಆರ್.ಟಿ.ಓ ಕಚೇರಿಯ ಸಿಬ್ಬಂದಿಗಳ ಜೊತೆ ಕೆಲಕಾಲ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಕಲೇಶಪುರ ಎ.ಆರ್.ಟಿ.ಓ ಕಚೇರಿಗೆ ದಿನನಿತ್ಯ ಮೂರು ತಾಲೂಕುಗಳಿಂದ ಸಾರ್ವಜನಿಕರು ಬರುತ್ತಾರೆ. ಆದರೆ ಹೀಗೆ ಬರುವ ಸಾರ್ವಜನಿಕರಿಗೆ ಎ.ಆರ್.ಟಿ.ಓ ಕಚೇರಿ ಸಿಬ್ಬಂದಿಗಳು ಕೆಲಸ ಮಾಡಿಕೊಡುವುದಿಲ್ಲ ದಲ್ಲಾಳಿಗಳ ಮೂಲಕ ಬಂದರೆ ಕೆಲಸ ಮಾಡಿಕೊಡುತ್ತಾರೆ ಎಂಬ ಆರೋಪಗಳಿದೆ.
ಈ ನಿಟ್ಟಿನಲ್ಲಿ ನಾನು ಕಚೇರಿಗೆ ಬಂದು ಪರಿಶೀಲನೆ ಮಾಡಿದ್ದೇನೆ. ಕಳೆದ ಕೆಲವಾರಗಳ ಹಿಂದೆ ಕಚೇರಿಯಲ್ಲಿ ದಲ್ಲಾಳಿಯೋರ್ವನ ಹುಟ್ಟು ಹಬ್ಬ ಮಾಡಿದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳ ಅಮಾನತ್ತಾಗಿದ್ದು ಆದರೂ ಸಹ ಇಲ್ಲಿನ ಪರಿಸ್ಥಿತಿ ನೋಡಿದರೆ ಇಲ್ಲಿನ ಸಿಬ್ಬಂದಿಗಳು ಯಾವುದೆ ಪಾಠ ಕಲಿತಂತೆ ಕಾಣುವುದಿಲ್ಲ. ಕೂಡಲೆ ಇಲ್ಲಿನ ಸಿಬ್ಬಂದಿಗಳು ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಸಾರ್ವಜನಿಕರಿಗೆ ಗೌರವ ನೀಡಲು ಮುಂದಾಗಬೇಕು. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿರುವುದನ್ನು ಮನಗಾಣಬೇಕು.
ಸಕಲೇಶಪುರದ ಜನ ಅತ್ಯಂತ ಸೂಕ್ಷ್ಮ ಸ್ವಭಾವವುಳ್ಳವರು, ಜನರಿಗೆ ಅಗೌರವವಾದರೆ ಸಹಿಸುವುದಿಲ್ಲ. ಹೀಗಾಗಿ ಸಿಬ್ಬಂದಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.ಎ.ಆರ್.ಟಿ.ಓ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿರುವುದು ನನಗೆ ತಿಳಿದಿದೆ ಈ ಕುರಿತು ನಾನು ಸಾರಿಗೆ ಮಂತ್ರಿಗಳ ಬಳಿ ಈಗಾಗಲೆ ಮಾತನಾಡಿದ್ದೇನೆ. ಕೂಡಲೆ ಅಗತ್ಯವಿರುವ ಸಿಬ್ಬಂದಿಗಳ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇನೆ.
ಎ.ಆರ್.ಟಿ.ಓ ಕಚೇರಿ ಸಿಬ್ಬಂದಿಗಳು ನೇರವಾಗಿ ಬಂದ ಸಾರ್ವಜನಿಕರ ಕೆಲಸಗಳನ್ನು ಯಾವುದೆ ತಾರತಮ್ಯ ಮಾಡದೆ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ನಾನು ಪದೇ ಪದೇ ಕಚೇರಿಗೆ ಭೇಟಿ ನೀಡುತ್ತೇನೆ. ಸಿಬ್ಬಂದಿಗಳು ಜನರ ಕೆಲಸಗಳನ್ನು ವಿಳಂಬ ಮಾಡದೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂಧರ್ಭದಲ್ಲಿ ಎ.ಆರ್.ಟಿ.ಓ ಬ್ರೇಕ್ ಇನ್‌ಸ್ಪೆಕ್ಟರ್ ಆಲಿಯುದ್ದೀನ್, ಸಿಬ್ಬಂದಿಗಳಾದ ವೀಣಾ, ಅಶೋಕ, ಪರಮೇಶ್, ಗೌತಮ್, ಮುಂತಾದವರು ಹಾಜರಿದ್ದರು.
5 ಎಸ್.ಕೆ.ಪಿ.ಪಿ 1 ಸಕಲೇಶಪುರ ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಸಾರ್ವಜನಿಕರ ಅಹುವಾಲುಗಳನ್ನು ಆಲಿಸಿದರು.