ಸಕಲೇಶಪುರ: ಪ್ರಸಿದ್ಧ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ವೇಳೆ ಸ್ಥಳೀಯ ಕಿಡಿಗೇಡಿಗಳ ಗುಂಪೊಂದು ಫೋಟೋಗ್ರಾಫರ್ಗಳ ಮೇಲೆ ಭೀಕರ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.ದಾಳಿಯ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಪುಡಿ ಮಾಡಲಾಗಿದ್ದು, ಚಿನ್ನದ ಸರ ದೋಚಲಾಗಿದೆ ಎಂದು ಆರೋಪಿಸಲಾಗಿದೆ.
ಹಾಸನದ ಫೋಟೋಗ್ರಾಫರ್ ನವೀನಂದನ್ ಕೆ.ಎಸ್. (21) ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಸಹೋದ್ಯೋಗಿ ಚೇತನ್ ಮತ್ತು ಮದುವೆಯಾಗಲಿರುವ ಜೋಡಿಯೊಂದಿಗೆ ಬೆಳಿಗ್ಗೆ 7:30ಕ್ಕೆ ದೇವಸ್ಥಾನಕ್ಕೆ ತಲುಪಿದ್ದರು. ಸುಮಾರು 8:00 ಗಂಟೆಗೆ ಬೆಂಗಳೂರಿನ ಮತ್ತೊಂದು ಫೋಟೋಗ್ರಾಫಿ ತಂಡ (ಅಭಿಷೇಕ್ ಮತ್ತು ಯಶವಂತ್) ಅಲ್ಲಿಗೆ ಬಂದಾಗ, ಮಾರುಬೈಲು ಗ್ರಾಮದ ನಿವಾಸಿ ಅಭಿ ಎಂಬಾತ ಬೆಂಗಳೂರಿನ ತಂಡದ ಜೊತೆ ಜಗಳ ತೆಗೆದಿದ್ದಾನೆ. ತಂಡದ ಯಶವಂತ್ ಎಂಬುವವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.

ಶುಕ್ರವಾರ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಅಭಿ ಎಂಬಾತ ತನ್ನ 7 ರಿಂದ 8 ಮಂದಿ ಬೆಂಬಲಿಗರೊಂದಿಗೆ ಎರಡು ಕಾರುಗಳಲ್ಲಿ (KA22 MA 2209 ಮತ್ತು KA10 M 3121) ಸ್ಥಳಕ್ಕೆ ಮರಳಿ ಬಂದಿದ್ದಾನೆ. ದೂರಿನಲ್ಲಿ ಹೆಸರಿಸಲಾದ ಪ್ರಶಾಂತ್, ರಕ್ಷಯ್, ಅರವಿಂದ್, ಉಚಿತ್, ಪ್ರಜ್ವಲ್ ಮತ್ತು ನಿಶಾಂತ್ ಎಂಬುವವರು ಕೈ-ಕಾಲು ಅಲ್ಲದೆ ನಂತರದಲ್ಲಿ ಮರದ ದೊಣ್ಣೆ ಮತ್ತು ಕಲ್ಲುಗಳಿಂದ ಫೋಟೋಗ್ರಾಫರ್ಗಳ ಮೇಲೆ ಮುಗಿಬಿದ್ದಿದ್ದಾರೆ. ದಾಳಿಕೋರರು ನವೀನಂದನ್ ಅವರ ಕುತ್ತಿಗೆಗೆ ಕೈ ಹಾಕಿ ಉಸಿರುಗಟ್ಟಿಸಲು ಯತ್ನಿಸಿದ್ದಲ್ಲದೆ, ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ವೃತ್ತಿಪರ ಶೂಟಿಂಗ್ಗಾಗಿ ಬಳಸುತ್ತಿದ್ದ ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಮತ್ತು ಲೆನ್ಸ್ಗಳನ್ನು ನೆಲಕ್ಕೆ ಅಪ್ಪಳಿಸಿ ಜಖಂಗೊಳಿಸಿದ್ದಾರೆ.
ಗಾಯಗೊಂಡ ಫೋಟೋಗ್ರಾಫರ್ಗಳು ಸಕಲೇಶಪುರ ಸರ್ಕಾರಿ ಆಸ್ಪತ್ರೆ ಹಾಗೂ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಂಟು ಮಂದಿ ಆರೋಪಿಗಳ ವಿರುದ್ಧ ಕ್ರೈಂ ಸಂಖ್ಯೆ: 49/2026 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸುಂದರ ತಾಣಗಳಲ್ಲಿ ಫೋಟೋಶೂಟ್ ನಡೆಸುವವರಿಗೆ ಸೂಕ್ತ ರಕ್ಷಣೆ ಬೇಕೆಂದು ಸ್ಥಳೀಯ ಛಾಯಾಗ್ರಾಹಕರು ಆಗ್ರಹಿಸಿದ್ದಾರೆ.
