ಸಕಲೇಶಪುರ: ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ಮನುಷ್ಯ ಎಂಬ ನುಡಿಗಟ್ಟು ಎಷ್ಟು ಸತ್ಯವೋ, ಅದೇ ರೀತಿಯಲ್ಲಿ ಮಳೆಯ ಏಕೈಕ ಮೂಲವಾದ ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಸಿಬ್ಬಂದಿಗಳ ಹೋರಾಟವು ಅತ್ಯಂತ ಮಹತ್ವದ್ದಾಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿ – ಮಲೆನಾಡಿನ ಹಿಡುವಳಿ ಜಮೀನುಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷವು ನಿತ್ಯ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಇಲಾಖೆಯ ಘನತೆ ಹಾಗೂ ಗೌರವವನ್ನು ಉಳಿಸಿಕೊಂಡು, ಸಾರ್ವಜನಿಕರನ್ನು ಸಮಾಧಾನಗೊಳಿಸುವುದು ಅರಣ್ಯ ಸಿಬ್ಬಂದಿಗಳ ಪ್ರಮುಖ ಕರ್ತವ್ಯವಾಗಿದೆ. ಅಲ್ಲದೆ, ಅಕ್ರಮ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ರೆಸಾರ್ಟ್, ಹೋಂಸ್ಟೇಗಳ ವಿರುದ್ಧ ಮೊಕದ್ದಮೆ ಹೂಡುವುದು, ಬೇಸಿಗೆ ಕಾಲದಲ್ಲಿ ಬೆಟ್ಟ-ಗುಡ್ಡಗಳಲ್ಲಿ ಬೆಂಕಿ ನಂದಿಸುವುದು, ಜೀವವನ್ನು ಪಣಕ್ಕಿಟ್ಟು ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ರಕ್ಷಿಸುವಂತಹ ಸವಾಲಿನ ಕರ್ತವ್ಯವನ್ನು ಅರಣ್ಯ ಸಿಬ್ಬಂದಿಗಳು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಹಾಗೆ ಕಾಡು ಕಾಪಾಡುವ ಅರಣ್ಯ ಸಿಬ್ಬಂದಿಗಳಿಗೆ ಸಹ ಒಂದು ವಿಶೇಷ ಕಾರ್ಯಕ್ರಮವನ್ನು ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಆಯೋಜಿಸಬೇಕಾಗಿದೆ. ವಿಶೇಷವಾಗಿ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಗಸ್ತು ಪಾಲಕರು, ಅರಣ್ಯ ರಕ್ಷಕರಂತಹ ಮುಂಚೂಣಿ ಸಿಬ್ಬಂದಿಗಳಿಗೆ ನಮನ ಸಲ್ಲಿಸಬೇಕು” ಎಂದು ಅವರು ಮನವಿ ಮಾಡಿದರು.
ಅರಣ್ಯ, ಜೀವಶಾಸ್ತ್ರ ಹಾಗೂ ಪರಿಸರ ಇಲಾಖೆಯ ಗೌರವವನ್ನು ಉಳಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳಿಗೆ ಮಲೆನಾಡು ರಕ್ಷಣಾ ವೇದಿಕೆಯ ಪರವಾಗಿ “ಹಸಿರು ಸೈನ್ಯ”ಕ್ಕೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇವೆ ಎಂದು ಸಾಗರ್ ಜಾನೇಕೆರೆ ಹೇಳಿದರು.
