ಚಿಕ್ಕಮಗಳೂರು: ಇಲ್ಲಿನ ನಗರಸಭೆಗೆ ನೂತನ ಅಧ್ಯಕ್ಷರಾಗಿ 15ನೇ ವಾರ್ಡಿನ ಸ್ವತಂತ್ರ ಅಭ್ಯರ್ಥಿ ಹಾಗೂ ಜೆಡಿಎಸ್-ಬಿಜೆಪಿ ಬೆಂಬಲಿತ ಶೀಲಾದಿನೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೀಲಾ ದಿನೇಶ್ ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಅವರನ್ನು ಹೊರತುಪಡಿಸಿ ಇನ್ಯಾವುದೇ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಅವಿರೋಧ ಆಯ್ಕೆ ಘೋಷಿಸಿದರು.

ಬಳಿಕ ಅಭಿನಂದನಾ ಸಮಾರಂಭ ನಡೆದು ಶಾಸಕ H.D ತಮ್ಮಯ್ಯ ಮಾತನಾಡಿ, ಯಾವುದೇ ಪಕ್ಷ ಎನ್ನುವುದಕ್ಕಿಂತ ನಗರದ ಅಭಿವೃದ್ಧಿ ಮುಖ್ಯ .ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡಲಿ ಎಂದು ಹೇಳಿದರು.
ಪರಿಷತ್ ಸದಸ್ಯ SL ಬೋಜೇಗೌಡ ಮಾತನಾಡಿ, ಅವಿರೋಧ ಆಯ್ಕೆ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ, ಎಲ್ಲರನ್ನೂ ಒಮ್ಮತದಲ್ಲಿ ಕೊಂಡೊಯ್ದು ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ ಒಳ್ಳೆಯ ಕೆಲಸ ಮಾಡಿ, ಜನಾನುರಾಗಿಯಾಗಿ ತಮ್ಮದೇ ಹೆಜ್ಜೆ ಗುರುತನ್ನು ಮೂಡಿಸಲಿ ಎಂದು ಹಾರೈಸಿದರು. ಸಂಸತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.