ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದ ಸಚಿವೆ ಶೋಭಾ ಕರಂದ್ಲಾಜೆ ಇಂದು ಸದಾನಂದ ಗೌಡರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಚುನಾವಣೆಯಲ್ಲಿ ತಮಗೆ ಸಹಕಾರ ನೀಡುವಂತೆ ಡಿ.ವಿ.ಸದಾನಂದಗೌಡರ ಬಳಿ ಮನವಿ ಮಾಡಿಕೊಂಡರು. ಇನ್ನು ಟಿಕೆಟ್ ಸಿಗದಿರುವ ಬಗ್ಗೆ ಬೇಸರಗೊಂಡಿರುವ ಸದಾನಂದಗೌಡರು, ಪಕ್ಷದ ಆದೇಶ ಪಾಲನೆ ಮಾಡುವುದಾಗಿ, ಶೋಭಾ ಕರಂದ್ಲಾಜೆ ಪರ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ಬೆಂಗಳೂರು ಉತ್ತರ ಲೋಕಸಭಾ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿರುವ ಶೋಭಾ ಕರಂದ್ಲಾಜೆಗೆ ಕ್ಷೇತ್ರದಲ್ಲಿ ಬಹುತೇಕ ನಾಯಕರನ್ನು ಸಮಾಧಾನ ಪಡಿಸುವುದೇ ದೊಡ್ಡ ಸವಾಲಾಗಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ನಗರಕ್ಕೆ ವಾಪಸ್ ಆಗಿರುವುದಕ್ಕೆ ಹಲವರಿಗೆ ಅಸಮಾಧಾನ ಇದೆ. ಪರೋಕ್ಷವಾಗಿ ಸದಾನಂದ ಗೌಡರಿಂದಲೂ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗಿದ್ದಕ್ಕೆ ವಿರೋಧ ಇದೆ. ಹೀಗಾಗಿ ಬೆಂಗಳೂರು ರಾಜಕಾರಣದ ಮೇಲೆ ಶೋಭಾ ಕರಂದ್ಲಾಜೆ ಹಿಡಿತ ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಶೋಭಾರನ್ನು ಬೆಂಬಲಿಸುವ ಬಗ್ಗೆ ಇನ್ನೂ ನಾಯಕರಲ್ಲಿ ಸಹಮತವಿಲ್ಲ. ಎಲ್ಲರ ಬೆಂಬಲ ಪಡೆದು ಶೋಭಾ ಕರಂದ್ಲಾಜೆ ಚುನಾವಣೆ ಎದುರಿಸಲು ಸಾಕಷ್ಟು ಸವಾಲುಗಳಿವೆ. ಹೀಗಾಗಿ ಒಗ್ಗಟ್ಟಿನ ಮಂತ್ರ ಪಠಿಸಲು ಶೋಭಾ ಕರಂದ್ಲಾಜೆ ಪ್ರಚಾರದಲ್ಲಿ ಎಲ್ಲರೂ ಭಾಗಿಯಾಗುವಂತೆ ನೋಡಿಕೊಳ್ಳಿ ಎಂದು ಸದಾನಂದಗೌಡರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.