ಬೆಂಗಳೂರು: ಈಗಾಗಲೇ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಿಂದ ತೀವ್ರ ನೊಂದಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ದೇವೇಗೌಡರು ಮನೆಯಿಂದ ಹೊರಗೆ ಬಂದಿಲ್ಲವಂತೆ. ಊಟ ತಿಂಡಿ ಕೂಡಾ ಸರಿಯಾಗಿ ಮಾಡದ ಕಾರಣ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ತಿಳಿದುಬಂದಿದೆ.
ಇದ್ರಿಂದ ಕುಟುಂಬಸ್ಥರು ಆತಂಕಗೊಂಡಿದ್ದು ದೇವೇಗೌಡರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ದೇವೇಗೌಡರ ಪುತ್ರಿಯರೂ ತಂದೆಯ ಮನೆಯಲ್ಲೇ ಉಳಿದುಕೊಂಡು ಅಪ್ಪನ ಆರೈಕೆ ಮಾಡ್ತಿದ್ದಾರೆ. ಇನ್ನೂ ನಿತ್ಯ ವೈದ್ಯರು ಬಂದು ಆರೋಗ್ಯ ತಪಾಸಣೆ ಮಾಡ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಬಗ್ಗೆಯೂ ಸುದ್ದಿ ಬಿತ್ತರವಾಗ್ತಿದ್ದು ದೇವೇಗೌಡರಿಗೆ ಹೆಚ್ಚು ಟಿವಿ ನೋಡದಂತೆ ಕುಟುಂಬಸ್ಥರು ನೋಡಿಕೊಳ್ತಿದ್ದಾರೆ ಎನ್ನಲಾಗಿದೆ.