ಚಿಕ್ಕಮಗಳೂರು: 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕ ಶಂಕರಾಚಾರ್ಯರು ಸ್ಥಾಪಿಸಿದ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರ ಶೃಂಗೇರಿ ಶಾರದಾ ಪೀಠದ ಬಳಿ ತುಂಗಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣದ ಕಾಮಗಾರಿ ಸಧ್ಯದಲ್ಲಿ ಆರಂಭವಾಗಲಿದೆ.
ವರ್ಷದ ಹನ್ನೆರೆಡು ತಿಂಗಳು ಶೀಮಠದ ಭಕ್ತಾದಿಗಳಿಗೆ ಧಾರ್ಮಿಕ ವಿಧಿ,ವಿಧಾನಗಳನ್ನು ನೆರವೇರಿಸಲು ನೀರಿನ ಕೊರತೆಯಾಗದಂತೆ ಶ್ರೀಮಠದ ಆಶಯದಂತೆ ಈ ಕೆಲಸ ನಡೆಯಲಿದೆ.
ಶ್ರೀಮಠದ ಮನವಿಯಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಕೋರಿಕೆ ಮತ್ತು ರಾಜ್ಯದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ಆಸಕ್ತಿ ಮತ್ತು ಪ್ರಯತ್ನ ಈ ಯೋಜನೆ ಕಾರ್ಯ ರೂಪಕ್ಕೆ ಬರಲು ಮುಖ್ಯ ಕಾರಣ.ಯೋಜನೆಯ ಅಂದಾಜು ವೆಚ್ಚ 89 ಕೋಟಿ. ಶೃಂಗೇರಿ ಮಠದ ತೂಗು ಸೇತುವೆಯ ಕೆಳ ಭಾಗದಲ್ಲಿ ನೀರು ಸಂಗ್ರಹಿಸಲು ಬ್ಯಾರೇಜ್ ನಿರ್ಮಿಸಲಿದ್ದಾರೆ.
ಅಡಿಪಾಯ ಹಾಕಲು ಪರೀಕ್ಷೆ ಕಾರ್ಯ(ಟ್ರಯಲ್ ಬೋರ್) ಕಾಮಗಾರಿಯ ಒಂದು ಕೋಟಿ ವೆಚ್ಚದ ಟೆಂಡರ್ ಈಗಾಗಲೇ ಡಿಸೈನ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಪಡೆದು ಕೊಂಡಿದ್ದಾರೆ.
ಮಳೆಯ ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭವಾಗಲಿದೆ.ಅಂದಾಜು4 ರಿಂದ 5 ಮೀಟರ್ ನದಿಯ ಕೆಳಭಾಗದಲ್ಲಿ ಗಟ್ಡಿ ಬಂಡೆ ಸಿಗುವವರೆಗೆ ಪರೀಕ್ಷೆ ನಡೆಸಲಿದ್ದಾರೆ.
ಅಡಿಪಾಯದ ಪರೀಕ್ಷೆ ನಂತರ ಮುಖ್ಯ ಕಾಮಗಾರಿ ಪ್ರಾರಂಭವಾಗಲಿದೆ. ಬ್ಯಾರೇಜ್ 135 ಮೀಟರ್ ನಿಂದ 140 ಮೀಟರ್ ಅಗಲವಿರುತ್ತದೆ.ಎತ್ತರ ಅಂದಾಜು 3 ಮೀಟರ್ ಇರಲಿದೆ.ಕಪ್ಪೆ ಶಂಕರದ ಮಟ್ಟದವರೆಗೆ ಮಾತ್ರ ನೀರು ನಿಲ್ಲಲಿದೆ.ನರಸಿಂಹ ವನಕ್ಕೆ ಯಾವುದೇ ಸಮಸ್ಯೆಯಾಗದಂತೆ ಡಿಸೈನ್ ಮಾಡಲಾಗಿದೆ.ನೀರು ನಿಲ್ಲಲು ನದಿಯಲ್ಲಿ ಈಗ ಇರುವ ಮಣ್ಣು ಮತ್ತು ಶಿಲ್ಟ್ ತೆಗೆಯಲಾಗುವುದು.
ಮಣ್ಣು ಕೊರೆಯುವ ಸ್ಥಳಗಳಲ್ಲಿ ತಡೆಗೋಡೆ (ರಿಟೈನ್ ವಾಲ್) ನಿರ್ಮಿಸಲಾಗುವುದು. ಮಳೆಗಾಲದಲ್ಲಿ
ನೀರು ಸರಾಗವಾಗಿ ಹರಿದು ಹೋಗುವಂತೆ ಸುಯಿಜ್ ಗೇಟ್ ನಿರ್ಮಿಸಲಾಗುವುದು.ಯೋಜನೆಯಲ್ಲಿ ಯಾವುದೇ ಕಾಡು ನಾಶ ಮತ್ತು ಭೂಮಿ ಮುಳುಗಡೆ ಆಗದಿರುವುದರಿಂದ
ಪರಿಸರ ಸ್ನೇಹಿ ಯೋಜನೆ ಆಗಲಿದೆ ಎಂದು ಹೇಳಲಾಗಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ ಜಲ ಅಭಿವೃದ್ಧಿಯಾಗಲಿದೆ.ಪ್ರವಾಸೋದ್ಯಮಕ್ಕೆ ಮತ್ತಷ್ಟುಮೆರುಗು ಬರಲಿದೆ.ವರ್ಷದ ಎಲ್ಲಾ ಖುತುವಿನಲ್ಲಿ ನೀರು ನಿಲ್ಲುವುದರಿಂದ ಬೋಟಿಂಗ್ ಮತ್ತು ಗಾಂಧಿ ಮೈದಾನದಲ್ಲಿ
ಸುಂದರವಾದ ಪಾರ್ಕ್ ನಿರ್ಮಿಸುವ ಆಲೋಚನೆ ಇರುವುದಾಗಿ ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಯೋಜನೆಯ ಮುಂದಿನ ಘಟ್ಟದಲ್ಲಿ ಶೃಂಗೇರಿ ಮೆಣಸೆ ಸಮೀಪ ಒಂದು ಬ್ಯಾರೇಜ್ ಮತ್ತು ಹರಿಹರಪುರ ಮಠದ ಸಮೀಪ ಒಂದು ಬ್ಯಾರೇಜ್ ನಿರ್ಮಿಸಲಾಗುವುದು ಎಂದು ತಿಳಿದು ಬಂದಿದೆ.
