ಶೃಂಗೇರಿ: ತಾಲೂಕಿನ ಗಾಂಧಿ ಮೈದಾನ ಜಾಗ ಪಟ್ಟಣ ಪಂಚಾಯಿತಿಗೆ ಒಳಪಟ್ಟಿದ್ದು ಇದರ ಸಂಪೂರ್ಣ ಅಭಿವೃದ್ಧಿ ಹಾಗೂ ರಕ್ಷಣೆ ಹೊಣೆಗಾರಿಕೆಯನ್ನು ಪಟ್ಟಣ ಪಂಚಾಯಿತಿ ನಿರ್ವಹಿಸಬೇಕು ಎಂದು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೌದು .. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಕಂದಾಯ ಇಲಾಖೆ ದಾಖಲೆ ಪ್ರಕಾರ ಹೊಳೆ ಖರಾಬು ಪ್ರದೇಶ ಆಗಿದ್ದು. ಇಂತಹ ನದಿ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ನದಿ ಕಲುಷಿತಗೊಳ್ಳುತ್ತಿದೆ ಎಂದು ದಿನಪತ್ರಿಕೆಯೊಂದರಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಸುಮೋಟೊ ಪ್ರಕರಣವನ್ನು ಜ.23ರಂದು ದಾಖಲಿಸಿಕೊಂಡಿತ್ತು. ಈ ಕುರಿತು ವಿಚಾರಣೆ ಕೈಗೊಂಡು ಪರಿಶೀಲನೆ ನಡೆಸಿ ಭೂಕಬಳಿಕೆ ಕೇಸ್ ವಜಾಗೊಳಿಸಿ ಪಟ್ಟಣ ಪಂಚಾಯಿತಿಗೆ ಜವಾಬ್ದಾರಿ ನೀಡಿದೆ.
ಗಾಂಧಿ ಮೈದಾನವು ಕೆಳೆದ ಆರು ದಶಕಗಳಿಂದ ಅಂದಿನ ಪುರಸಭೆ ಹಾಗೂ ಇಂದಿನ ಪಟ್ಟಣ ಪಂಚಾಯಿತಿಗೆ ಸೇರಿದ್ದಾಗಿದೆ. 1960-61ರಿಂದ 2023-24ರ ನಾಲಿಗೆ ಕಂದಾಯ ಅಸೆಸ್ಟೆಂಟ್ ರಿಜಿಸ್ಟರ್‌ನಲ್ಲಿ ಗಾಂಧಿ ಮೈದಾನ ಎಂದು ನಮೂದು ಆಗಿದ್ದು, ಪವಿತ್ರ ಯಾತ್ರಾ ಸ್ಥಳಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಿದ್ದು ಅಂದಾಜು ಐದು ದಶಕಗಳಿಂದ ಪ್ರವಾಸಿ ವಾಹನ ನಿಲುಗಡೆ ಶುಲ್ಕದ ಹರಾಜು ಪ್ರಕ್ರಿಯೆ ನಡೆಯುತ್ತ ಬಂದಿದೆ ಪಂಚಾಯಿತಿಗೆ ಉತ್ತಮ ಆದಾಯವನ್ನು ನೀಡುತ್ತಿದೆ. ಈ ಹಿಂದೆ ಗಾಂಧಿ ಮೈದಾನದಲ್ಲಿ ಟೆಂಟ್ ಸಿನಿಮಾ, ಜಾನುವಾರು ಜಾತ್ರೆ, ಯಕ್ಷಗಾನ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ದಸರಾ ಸಂದರ್ಭದಲ್ಲಿ ಸರ್ಕಸ್ ಮನೋರಂಜನೆಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ ಎಂಬ ಅಂಶವನ್ನು ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ವರದಿ ಪರಿಶೀಲನೆ ಮಾಡಿದ ವಿಶೇಷ ನ್ಯಾಯಾಲಯ ಗಾಂಧಿ ಮೈದಾನ ಜಾಗ ಪಂಚಾಯಿತಿಗೆ ಒಳಪಟ್ಟಿದ್ದು ಇದರ ಸಂಪೂರ್ಣ ಅಭಿವೃದ್ಧಿ ಮತ್ತು ರಕ್ಷಣೆ ಪಪಂ ನಿರ್ವಹಿಸಬೇಕು ಎಂದು ಆದೇಶ ನೀಡಿದೆ.
