ಜಯಪುರ : ಜಯಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ಗ್ರಾಮ ಪಂಚಾಯ್ತಿಯ ಸೀಮಿತ ಅನುದಾನವನ್ನು ಬಳಸಿಕೊಂಡು ರಸ್ತೆ, ಕುಡಿಯುವ ನೀರು ಚರಂಡಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಹೇಳಿದರು.
ಜಯಪುರ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತ್ ವತಿಯಿಂದ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಸದಸ್ಯರ ಸಹಕಾರ ಪಡೆದು ಮಾಡಲಾಗಿದ್ದು ಸುಮಾರು 9 ಲಕ್ಷ ಅನುದಾನದಲ್ಲಿ ವಿನಾಯಕ ನಗರದ ರಸ್ತೆ ಕಾಂಕ್ರೀಟಿಕರಣ ಮಾಡಿದ್ದೇವೆ ಹಲವು ವರ್ಷಗಳಿಂದ ಶಾಸಕರು ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರು ಈ ರಸ್ತೆ ನಿರ್ಮಾಣಕ್ಕೆ ಯಾರು ಮನಸ್ಸು ಮಾಡಿರಲಿಲ್ಲ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಎಕರೆ ಜಾಗ ನಿವೇಶನಕ್ಕಾಗಿ ಮಂಜೂರಾಗಿದ್ದು ಎಲ್ಲಾ ಅರ್ಹ ಅರ್ಜಿದಾರ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲಿದ್ದೇವೆ ಎಂದರು.
ನಂತರ ಪಿಡಿಓ ಶಿವಕುಮಾರ್ ಮಾತನಾಡಿ 2022-23 ರಲ್ಲಿ ಇದ್ದ 13.5 ಲಕ್ಷ ರೂಗಳ ಆದಾಯದ ಬೇಡಿಕೆಯನ್ನು 2024-25 ಸಾಲಿಗೆ ಸುಮಾರು 50 ಲಕ್ಷ ರೂ ಗಳಿಗೆ ಏರಿಕೆ ಮಾಡಿದ್ದೂ, ಸರ್ಕಾರಿ ನಿಯಮದಂತೆ ತೆರಿಗೆ ಪರಿಷ್ಕರಣೆ ಹಾಗೂ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿರುವ ಪರಿಣಾಮ ಗ್ರಾಮ ಪಂಚಾಯತ್ ಆದಾಯ ಏರಿಕೆಯಾಗಿದೆ. ಇದರಿಂದಾಗಿ ಈ ವರ್ಷ ಗ್ರಾಪಂ ಸ್ವಂತ ಹಣಕಾಸಿನ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಲಿದೆ. ಎಸ್ ಸಿ, ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಹಣ ಮೀಸಲಿರಿಸಿದ್ದು, ಶಿಕ್ಷಣ, ವೈದ್ಯಕೀಯ ನೆರವು, ಹಳೆಮನೆ ರಿಪೇರಿಗೆ 15 ಲಕ್ಷ ಹಣ ಮೀಸಲು ಇರಿಸಿದ್ದೇವೆ. ಆಗಸ್ಟ್ 15ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಮತ್ತು 12 ನೇ ತರಗತಿಯಲ್ಲಿ ಶೇಕಡಾ 90 ಕ್ಕಿಂತ ಜಾಸ್ತಿ ಅಂಕ ಪಡೆದ ಎಲ್ಲಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾತಿ ಧರ್ಮದ ಮಾನದಂಡವನ್ನು ಪರಿಗಣಿಸದೆ ಪ್ರತಿಭಾ ಪುರಸ್ಕಾರ ಮಾಡುವ ತೀರ್ಮಾನವನ್ನು ಮಾಡಲಾಗಿದೆ. ನಗರದಲ್ಲಿ ಪ್ರತಿದಿನ ಒಣ ಕಸದ ಸಂಗ್ರಹ ಮತ್ತು ವಿಲೇವಾರಿ ಮಾಡಲಾಗುತ್ತಿದ್ದೂ, ತಿಂಗಳಿಗೆ ರೂ 80 ಸಾವಿರ ವೆಚ್ಚ ಮಾಡಲಾಗುತ್ತಿದೆ. ಕಸ ವಿಲೇವಾರಿ ಘಟಕ ಜಾಗದ ವಿವಾದ ನ್ಯಾಯಾಲಯದಲ್ಲಿರುವ ಕಾರಣ, ಹಸಿಕಸ ವಿಲೇವಾರಿಗೆ ಸಮಸ್ಯೆಯಾಗಿದ್ದು, ಅದಕ್ಕಾಗಿ ಖಾಸಗಿ ಜಾಗವನ್ನು ಪಡೆದು ಕಸ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ. ಗ್ರಾ ಪಂ ವ್ಯಾಪ್ತಿಯ 800 ಮನೆಗಳಿಗೆ ಕುಡಿಯುವ ನೀರು ನೀಡುವ ಸಲುವಾಗಿ ಸಿಬ್ಬಂದಿಗಳು ಮತ್ತು ವಿದ್ಯುತ್ ಬಿಲ್ ಗಾಗಿ ಸುಮಾರು 1.40 ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ. ಬಿಡಾಡಿ ದನಗಳ ಸಮಸ್ಯೆ ಜಾಸ್ತಿಯಾಗಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ಹಿಡಿದು ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡುವ ತೀರ್ಮಾನವಾಗಿದ್ದು, ಅವುಗಳನ್ನು ಸಾಕುವ ಗೋಶಾಲೆಗಳ ಕೊರತೆ ಇದೆ ಎಂದರು.
ಸದಸ್ಯ ಪ್ರವೀಣ್ ಕುಮಾರ್ ಮಾತನಾಡಿ, ಜಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜಲದುರ್ಗ ಭಾಗವೊಂದರಲ್ಲೇ ಸುಮಾರು 25 ಲಕ್ಷಕ್ಕೂ ಹೆಚ್ಚು ಕೆಲಸವಾಗಿದೆ. ಕೆಲವರು ರಾಜಕೀಯ ದುರುದ್ದೇಶದಿಂದ ಕೆಲಸವಾಗಿಲ್ಲ ಎಂಬ ಆರೋಪ ಮಾಡುತ್ತಿದ್ದು ಇದು ಸರಿಯಲ್ಲ. ಕಾಮಗಾರಿಗಳು ನೈಜ ವರದಿ ಪಡೆದು ಮಾತಾಡಬೇಕು ಎಂದರು.
ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೌಳಿ ರಾಮು ಮಾತನಾಡಿ, ಹೊಸ ಆಸ್ಪತ್ರೆಯ ಕಟ್ಟಡದ ಮುಖ್ಯ ದ್ವಾರದ ಸಮೀಪ ಶವಗಾರದ ಕೊಠಡಿ ಮಾಡಿದ್ದೂ ಇದು ಅವೈಜ್ಞಾನಿಕ ಎಂದರು. ಸ್ಥಳಾವಕಾಶದ ಕೊರತೆಯಿಂದ ಅಲ್ಲಿ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ ಸುಧೀಂದ್ರ ತಿಳಿಸಿದರು. ಗ್ರಾಮಸ್ಥ ಕುಮಾರ್ ಮಾತನಾಡಿ ಜಯಪುರ ಸರ್ಕಾರಿ ಶಾಲೆಯ 5 ಎಕರೆ ಜಾಗವನ್ನು ಕಬಳಿಸಲಾಗಿದೆ. ಅದನ್ನು ಶಾಲೆಗೆ ಬಿಡಿಸಿಕೊಡುವಂತೆ ಮನವಿ ಮಾಡಿದರು.
ಗ್ರಾಮಸ್ಥ ಅಳಗು ಮಾತನಾಡಿ ಅಲಗೇಶ್ವರ ರಸ್ತೆಯಲ್ಲಿ ರಸ್ತೆ ಬದಿಗೆ ಕೆಲವರು ಬೇಲಿ ಮಾಡಿದ್ದು, ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಬಿಡಾಡಿ ದನಗಳು ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದ್ದು ಕ್ರಮಕ್ಕೆ ಜನತೆ ಆಗ್ರಹಿಸಿದರು.
ಸಭೆಯಲ್ಲಿ ಪೊಲೀಸ್, ಸಮಾಜಕಲ್ಯಾಣ, ಕೃಷಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಜಯಮುರುಗೇಶ್, ಸದಸ್ಯರುಗಳಾದ ಪಣಿರಾಜ್,ಶ್ರೀನಿವಾಸ್, ಸಂಪತ್, ಪಳನಿ ನಳಿನಿ,
ರಮ್ಯಾ ವೆಂಕಟೇಶ್, ಶಕುಂತಲಾ ಹಾಗೂ ಇತರ ಸದಸ್ಯರು, ಗ್ರಾಮಸ್ಥರಿದ್ದರು.
ವರದಿ: ಶಶಿ ಬೆತ್ತದಕೊಳಲು
