ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್ ಮಧ್ಯೆ ಭಾರಿ ಲಡಾಯಿ ನಡೆಯುತ್ತಿದ್ದು ಹಾಗಾಗಿ ಶಾಸಕ ಟಿ.ಡಿ.ರಾಜೇಗೌಡ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗರ ಷಡ್ಯಂತ್ರದ ವಿರುದ್ಧ ಹೋರಾಟ ರೂಪಿಸಲು ‘ಸತ್ಯಮೇವ ಜಯತೇ’ ಸಮ್ಮಿಲನ ಸಭೆ ಅದ್ದೂರಿಯಿಂದ ನೆರವೇರಿತು.
ಹೌದು .. ಕೊಪ್ಪ ಪುರಭವನದಲ್ಲಿ ಶೃಂಗೇರಿ, ನರಸಿಂಹರಾಜಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಶಾಸಕ ಟಿ.ಡಿ.ರಾಜೇಗೌಡ ಬೆಂಬಲಿಗರು ‘ಸತ್ಯಮೇವ ಜಯತೇ’ ಸಮ್ಮಿಲನ ಸಭೆ ಅದ್ದೂರಿಯಿಂದ ನೆರವೇರಿಸಿದರು.
‘ಮಾಜಿ ಶಾಸಕರ ಮೇಲೆ ಮುಖ ಮುಚ್ಚಿಕೊಂಡು ಓಡಾಡುವ ಪ್ರಕರಣ ದಾಖಲಾಗಿತ್ತು. ಆಗ ಅವರು ಜಾಮೀನು ಪಡೆಯಲು ಓಡಾಡುತ್ತಿದ್ದರು. ಆದರೆ, ರಾಜೇಗೌಡ ಅವರು ಊರಲ್ಲೇ ಇದ್ದು ಪ್ರಕರಣ ಎದುರಿಸುತ್ತಿದ್ದು, ಪ್ರಕರಣ ದಾಖಲಾದಾಗ ತಡೆಯಾಜ್ಞೆ ತರಬಹುದಿತ್ತು. ಆದರೆ, ಜನರಿಗೆ ಸತ್ಯ ಗೊತ್ತಾಗಲಿ ಎಂಬ ಕಾರಣಕ್ಕೆ ಅವರು ಹಾಗೆ ಮಾಡಿಲ್ಲ. ದಾಖಲೆ ತಿದ್ದಿದ ಆರೋಪ ಬಂದಾಗ ನೀವು ಯಾಕೆ ತಡೆಯಾಜ್ಞೆ ತಂದಿದ್ದೀರಿ ಎಂದು ಜೀವರಾಜ್ ಅವರನ್ನು’ ಪ್ರಶ್ನಿಸಿದರು. ‘ನಿಮ್ಮ ದೂರಿಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ದಾಖಲೆ ಕೊಟ್ಟಿದ್ದೇವೆ. ನೀವು ಬೇಕಾದರೆ ಅಲ್ಲಿಂದ ಪಡೆಯಿರಿ. ಕಳಪೆ ಕಾಮಗಾರಿ ನಡೆಸಿದ ವ್ಯಕ್ತಿ ರಾಜೇಗೌಡ ಅವರ ವಿರುದ್ಧ ದೂರು ನೀಡುವ ಮುನ್ನ ಯೋಚಿಸಬೇಕಿತ್ತು. ದೂರು ಕೊಟ್ಟ ವ್ಯಕ್ತಿ ಸೈನಿಕರ ಕುಟುಂಬಕ್ಕೆ ಸೇರಿದ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಜೀವರಾಜ್ ಎಂದಿಗೂ ರಾಜಕಾರಣಕ್ಕೆ ಬರಲು ಸಾಧ್ಯವಿಲ್ಲ’.
2004ರಿಂದ 2018ರವರೆಗೆ ಶೃಂಗೇರಿ ಕ್ಷೇತ್ರಕ್ಕೆ ಕಳಂಕ ಬಂದಿತ್ತು. ಜೀವರಾಜ್ ಅವರು ಹಕ್ಕುಪತ್ರದ ದಾಖಲೆ ತಿದ್ದುವ ಮೂಲಕ ರೈತರ, ಕಾರ್ಮಿಕರ ಜೀವನವನ್ನು ಕಷ್ಟಕ್ಕೆ ದೂಡಿದ್ದರು. ಜನರ ಬದುಕು ಸುಧಾರಿಸುವ ಕೆಲಸ ಮಾಡಿಲ್ಲ. ಕಂದಾಯ ಭೂಮಿ ಅರಣ್ಯಕ್ಕೆ ಸೇರಿಸುವಾಗ ಸುಮ್ಮನಿದ್ದರು. ಬಿಜೆಪಿ ಅವಧಿಯಲ್ಲಿ ಜನರು ಹಕ್ಕುಪತ್ರಕ್ಕಾಗಿ ಮಧ್ಯವರ್ತಿಗಳನ್ನು ಅವಲಂಬಿಸಿದ್ದರು’ ಎಂದು ದೂರಿದರು. ‘ರಾಜ್ಯ ಸರ್ಕಾರ ನುಡಿದಂತೆ ನಡೆದಿರುವುದನ್ನು, ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಬಿಜೆಪಿ ಮನಃಸ್ಥಿತಿಯ ವಕೀಲರ ಮೇಲೆ ಪ್ರಕರಣ ದಾಖಲಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಆಗಿಲ್ಲ ಎಂದರೆ ನ್ಯಾಯಾಂಗ ಉಳಿಸುವ ಯಾವ ಮನಃಸ್ಥಿತಿಯೂ ಬಿಜೆಪಿಗೆ ಇಲ್ಲ’ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.
ಈ ವೇಳೆ ಕೆಪಿಸಿಸಿ ಸದಸ್ಯ ಎನ್.ಆರ್.ಪುರದ ಸದಾಶಿವ,ಅಂಶುಮಂತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಪಿ.ಸಿ.ಜೋಯ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕುಕ್ಕುಡಿಗೆ ರವೀಂದ್ರ ಮಾತನಾಡಿ, ನಟರಾಜ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಕೆ.ಜಿ.ಶೋಭಿಂತ್, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನಮಕ್ಕಿ, ಶೃಂಗೇರಿ ಕ್ಷೇತ್ರ ಘಟಕದ ಅಧ್ಯಕ್ಷ ದುರ್ಗಾ ಚರಣ್, ವಿಜಯಾನಂದ, ನುಗ್ಗಿ ಮಂಜುನಾಥ್, ಜೇಸುದಾಸ್, ನವೀನ್ ಮಾವಿನಕಟ್ಟೆ, ನವೀನ್ ಕರುವಾನೆ, ಪ್ರಿಯಾಂಕ ರಾಜೀವ್ ಹಾಗೂ ಕಾರ್ಯಕರ್ತರು ಇದ್ದರು.
