ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಡ ಪರಿಸರದಲ್ಲಿ ಭಯಾನಕ ಸುಂಟರಗಾಳಿ ಕಾಣಿಸಿಕೊಂಡು ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.
ನಾಡ ಗುಡ್ಡೆ ಅಂಗಡಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೈದಾನ ಹಾಗೂ ಜಾರುಬಂಡಿ ಮೈದಾನ ಪ್ರದೇಶದಲ್ಲಿ ಸುರಳಿ ಸುರುಳಿಯಾಗಿ ಸುತ್ತಿಕೊಂಡು ಗಾಳಿ ವೇಗವಾಗಿ ಬೀಸಿದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿತು. ಆಕಾಶಮುಖವಾಗಿ ಧೂಳು ಎದ್ದು ಸುತ್ತು ಹೊಡೆಯುವ ದೃಶ್ಯವನ್ನು ಕಂಡ ಜನರು ಕ್ಷಣಕಾಲ ಭಯಭೀತರಾಗಿದ್ದರು.

ಸುಂಟರಗಾಳಿ ಕೆಲವೇ ನಿಮಿಷಗಳ ಕಾಲ ಅಬ್ಬರಿಸಿದರೂ, ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಆಸ್ತಿನಷ್ಟ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
