ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಸಚಿವರಾದ ಈಶ್ವರಖಂಡ್ರೆ ಮತ್ತು ಕೃಷ್ಣಬೈರೇಗೌಡ ನೇತೃತ್ವದಲ್ಲಿ ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಗಳ ಬಗ್ಗೆ ಸಭೆ ನಡೆಸಿದ್ದಾರೆ ಜಿಲ್ಲೆಯ ಹಾಗಾಗಿ ಸಚಿವರ ಆದೇಶವನ್ನು ಅನುಷ್ಠಾನ ತರಬೇಕೆಂದು ನಾವೆಲ್ಲಾ ಇಲ್ಲಿ ಒಂದುಗೂಡಿದ್ದೇವೆ ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ವಿಜಯ್‌ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಜು.3 ರಂದು ನಡೆದ ಸಭೆಯಲ್ಲಿ ಇಬ್ಬರು ಸಚಿವರೊಂದಿಗೆ ಜಿಲ್ಲಾ ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಜಿಲ್ಲೆಯ ಐವರು ಶಾಸಕರು, ಕಂದಾಯ ಇಲಾಖೆ ಕಾರ್ಯದರ್ಶಿ, ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಮುಖಂಡರು ಭಾಗವಹಿಸಿದ್ದರು ಅಲ್ಲಿ ಜಿಲ್ಲೆಯ ಮೂಲ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ಹೇಳಿದರು.
ಎಮ್ಮೆದೊಡ್ಡಿ, ಚುರ್ಚೆಗುಡ್ಡ, ಕಾಮೇನಹಳ್ಳಿ ರೈತರ ಸಮಸ್ಯೆ, ಸೊಪ್ಪಿನಬೆಟ್ಟ, ಭದ್ರಾ ಮುಳಗಡೆ ರೈತರ ಸಮಸ್ಯೆ, ಜಿಲ್ಲೆಯ ನಮೂನೆ, 50-53, 57 ರ ಜತೆಗೆ ಜಿಲ್ಲೆ ನಿವೇಶನ ರಹಿತರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಒಟ್ಟಾರೆ ರಾಜ್ಯದಲ್ಲಿ ಇದ್ದ ಸುಮಾರು 9 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪರಿಷ್ಕರಿಸಿ ಸುಮಾರು 3.40೦ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮಿತಿಗೊಳಿಸಲಾಗಿದೆ. ಈ ಭೂಮಿಯು ಪೂರ್ಣ ಕಂದಾಯ ಭೂಮಿಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಎಫ್‌ಎಸ್‌ಒ ಅವರೊಂದಿಗೆ ಕಂದಾಯ ಅಗತ್ಯತೆಯ ಭೂಮಿಯನ್ನು ಗುರುತಿಸಲು ಎಲ್ಲ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರುಗಳಿಗೆ ಸೂಚನೆ ನೀಡಬೇಕು. ಅರಣ್ಯ 4(1) ರೈತರ ಸಾಗುವಳಿ ಮಾಹಿತಿಯ ಪಟ್ಟಿಯನ್ನು ಸಲ್ಲಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಡಿಮ್ಡ್ ಫಾರೆಸ್ಟ್ ಅಫಿಡವಿಟ್ ಸಲ್ಲಿಸುವ ಕಾಲಮಿತಿಯೊಳಗೆ ಈಗಾಗಲೆ ಘೋಷಿತವಾಗಿರುವ ಸೆಕ್ಷನ್ 4(1)ಅಧಿಸೂಚನೆಯಲ್ಲಿರುವ ರೈತರ ಸಾಗುವಳಿಯ ನಿಖರ ವಿಸ್ತೀರ್ಣ ಮತ್ತು ಗ್ರಾಮದ ಅಭಿವೃದ್ಧಿ ಮತ್ತಿತರೆ ಉಪಯೋಗಕ್ಕೆ ಅವಶ್ಯಕತೆ ಇರುವ ವಿಸ್ತೀರ್ಣವನ್ನು ಗುರುತಿಸಿ ಸೆಕ್ಷನ್ 17 ಅಂತಿಮ ಅಧಿಸೂಚನೆ ಮಾಡಲು ಎಫ್‌ಎಸ್‌ಒಗಳಿಗೆ ಸಚಿವರು ಸೂಚಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಸಮಿತಿ ಸಂಚಾಲಕರಾದ ಕೆ.ಕೆ.ರಘು, ವೀರಭದ್ರಪ್ಪ, ರವಿಕುಮಾರ್, ಈಶ್ವರ್, ಡಿ.ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.