ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಒಂದಾಗಿದ್ದು, ರಚನಾತ್ಮಕ ಟೀಕೆ, ಟಿಪ್ಪಣಿಗಳ ಮೂಲಕ ರಾಜಕೀಯ ರಂಗ, ಆಡಳಿತ ವರ್ಗವನ್ನು ಎಚ್ಚರಿಸಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾ ರಂಗ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶನಿವಾರ ನಗರದ ಸ್ಕೌಟ್ ಭವನದಲ್ಲಿ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ವಲಯದಿಂದ ರಚನಾತ್ಮಕ ಟೀಕೆ, ಟಿಪ್ಪಣಿಗಳು ಆ ಕ್ಷಣಕ್ಕೆ ನೋವುಂಟು ಮಾಡಿದರು. ಅವುಗಳನ್ನು ಸಕರಾತ್ಮಕ ವಾಗಿ ತಗೆದುಕೊಳ್ಳುವುದರಿಂದ ಸಮಾಜಕ್ಕೆ ಒಳ್ಳೇಯದಾಗುತ್ತದೆ. ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗು ತ್ತದೆ ಎಂದು ಅಭಿಪ್ರಾಯಿಸಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಪತ್ರಕರ್ತರು ತಮಗೆ ಮಾರ್ಗದರ್ಶನ ನೀಡಿದ್ದನ್ನು ಸಚಿವರು ಸ್ಮರಿಸಿಕೊಂಡರು.
ಹಾಗೆ ಶಾಸಕ ಎಚ್.ಡಿ.ತಮ್ಮಯ್ಯ ಕೂಡ ಮಾತನಾಡಿ, ಪತ್ರಿಕಾರಂಗ ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟ ದಲ್ಲಿ ಅನೇಕ ಪತ್ರಿಕೆಗಳು ಶಕ್ತಿಮೀರಿ ಶ್ರಮಿಸಿವೆ. ಬ್ರಿಟಿಷರಿಗೆ ಭಯಪಡದೆ ನಿರ್ಭೀತಿಯಾಗಿ ಜನತೆಗೆ ವಿಷಯಗಳನ್ನು ಮುಟ್ಟಿಸುವ ಕೆಲಸವನ್ನು ಪತ್ರಿಕೆಗಳು ಮಾಡಿವೆ ಎಂದು ಹೇಳಿದರು.
ಆ ನಂತರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಇಂದು ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ನಿರ್ಭೀತಿ ಯಿಂದ ಕೆಲಸ ಮಾಡಬೇಕು ಹಾಗೆ ಆಧುನಿಕ ತಂತ್ರಜ್ಞಾನದ ಪ್ರಭಾವ ಪತ್ರಿಕಾ ರಂಗದ ಮೇಲೂ ಬಿದ್ದಿದೆ. ಎಲ್ಲಾ ಸವಾಲುಗಳ ನಡುವೆ ನಿರ್ಭೀತೀಯ, ವಸ್ತುನಿಷ್ಠ, ಸತ್ಯದ ಸುದ್ದಿಗೆ ಆದ್ಯತೆ ಸಿಗಬೇಕು. ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜೇಗೌಡ ವಿವಿಧ ಸಂಘಸಂಸ್ಥೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
