ಚಿಕ್ಕಬಳ್ಳಾಪುರ; ಬೇಸಿಗೆ ರಜೆ ಪ್ರಾರಂಭವಾಯ್ತು ಅಂದರೆ ಸಾಕು, ಪೋಷಕರಿಗೆ ,ಮಕ್ಕಳಿಗೆ ಏನೋ ಒಂಥರಾ ಖುಷಿ. ಹೀಗಾಗಿ ಪೋಷಕರು, ಮಕ್ಕಳು ತಮ್ಮ ಸಂಬಂಧಿಕರ ಮನೆಗೋ ಅಥವಾ ತಮ್ಮ ತಮ್ಮ ಊರುಗಳಿಗೋ ತೆರಳುತ್ತಾರೆ. ಇದೆ ರೀತಿ ಪ್ಲಾನ್ ಮಾಡಿಕೊಂಡು ಮುಂಬೈನಿಂದ ಚಿಕ್ಕಬಳ್ಳಾಪುರಕ್ಕೆ ರಜೆಯ ಮಜಾ ಮಾಡಲು ಸಂಬಂಧಿಕರ ಮನೆಗೆ ಬಂದಿದ್ದ ಇಬ್ಬರು ಬಾಲಕಿಯರು ಈಜಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಚೇನಹಳ್ಳಿ ಬಳಿ ಇರುವ ದಂಡಿಗಾನಹಳ್ಳಿ ಡ್ಯಾಮ್‌ನಲ್ಲಿ ಬಾಲಕಿಯರು ಮುಳುಗಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಮುಂಬೈ ಮೂಲದ ಆಲಿಯಾ ಪಾಟೀಲ್ (17) ಹಾಗೂ ಜೋಯ ಪಾಟೀಲ್(14) ಮೃತಪಟ್ಟಿರುವ ಬಾಲಕಿಯರು. ಇವರಿಬ್ಬರು ಕುಟುಂಬ ಸಮೇತ ಬೇಸಿಗೆಯ ರಜೆ ಕಳೆಯಲು ಗೌರಿಬಿದನೂರಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ರಜೆ ಮುಗಿಸಿ ನಾಡಿದ್ದು ಮುಂಬೈಗೆ ವಾಪಸ್ ತೆರಳಬೇಕಾಗಿತ್ತು .ಆದರೆ ವಿಧಿಲಿಖಿತ ನೋಡಿ, ದಂಡಿಗಾನಹಳ್ಳಿ ಜಲಾಶಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಜಲಾಶಯಕ್ಕೆ ಹೋದವರು ಜಲಾಶಯದ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳೀಯ ಈಜುಕೋರರ ಸಹಾಯದಿಂದ ಬಾಲಕಿಯರ ಶವಗಳನ್ನು ಮೇಲಕ್ಕೆತ್ತಿ, ಮನೆಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಂಚೇನಹಳ್ಳಿ ಪೊಲೀಸರು, ಪೋಷಕರ ಮನವೊಲಿಸಿ ಶವಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಈ ಬಗ್ಗೆ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
