ಬೆಂಗಳೂರು: ಧರ್ಮಸ್ಥಳ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಎಸ್‍ಐಟಿ ನೇಮಕ ಮಾಡಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ತನಿಖೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ನಡೆಯಲಿ. ತಪ್ಪು ಯಾರೇ ಮಾಡಿದ್ದರು ತಪ್ಪಿಗೆ ಶಿಕ್ಷೆಯಾಗಲಿ; ತನಿಖೆಗೆ ನಾವು ಮಧ್ಯಪ್ರವೇಶಿಸುವುದಿಲ್ಲ; ಆದರೆ ತನಿಖೆಗೆ ಮುನ್ನವೇ ಕೆಲವರು ತನಿಖೆ ನಡೆಸಿ ತೀರ್ಪು ಕೊಡುವ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದರ
ಧರ್ಮಸ್ಥಳ ಎಂಬ ಸಂಸ್ಥೆಯನ್ನೇ ಅನುಮಾನಿಸುವ ಸಂಸ್ಥೆಯ ಮುಖ್ಯಸ್ಥರನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸುವ ಷಡ್ಯಂತ್ರದ ವಿರುದ್ಧ ನಾವಿದ್ದೇವೆ. ಧರ್ಮಸ್ಥಳ ಟ್ರಸ್ಟ್ 293 ಪ್ರಾಚೀನಕಾಲದ ಚೋಳರ ಕಾಲದ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದೆ. ಅದರಲ್ಲಿ ಚಿಕ್ಕಮಗಳೂರು ಕ್ಷೇತ್ರದ ಅಂಬಳೆ, ಕಳಸಾಪುರ, ಕಡೆಕಾಲುವೆ ದೇವಾಲಯಗಳು, ಚೋಳರಕಾಲದ ಸುಗ್ಗಿಕಲ್ಲು ಪುನರ್ ನಿರ್ಮಾಣ ಮಾಡಿದೆ. ಸ್ವಯಂಸೇವಾ ಸಂಘಗಳ 55 ಲಕ್ಷ ಸದಸ್ಯರು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜೊತೆಗೆ ಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ; 900 ಕೆರೆಗಳ ಜೀರ್ಣೋದ್ಧಾರ ಕೆಲಸವನ್ನು ಮಾಡಿದೆ; 13900 ಸಾಮೂಹಿಕ ವಿವಾಹಗಳು ನೆರವೇರಿದೆ; ಇದೆಲ್ಲವೂ ಒಳ್ಳೆ ಕೆಲಸವಲ್ಲವೇ; 13 ಸಾವಿರ ದೇವಾಲಯಗಳಿಗೆ 144 ಕೋಟಿ ರೂ ಧನ ಸಹಾಯ ಮಾಡಿದ್ದಾರೆ ಎಂದು ವಿವರಿಸಿದರು.
ಭಕ್ತರು ನೀಡಿದ ಕಾಣಿಕೆಯಿಂದ ಧರ್ಮಸ್ಥಳ ಸಮಾಜದ ಭಾಗವಾಗಿ ತುಂಬಾ ಕೆಲಸವನ್ನು ಮಾಡಿದೆ. ಸರ್ಕಾರ ಈ ಕೆಲಸಗಳನ್ನು ಮಾಡಿಲ್ಲ. ಧರ್ಮಸ್ಥಳವೆಂದರೆ ಸಂಸ್ಕøತಿಯ ಒಂದು ಭಾಗ. ಮಂಜುನಾಥ ಸ್ವಾಮಿ ಶೈವ ಪರಂಪರೆಗೆ ಸೇರಿದ್ದರೆ ವೈಷ್ಣವ ಪರಂಪರೆಯ ಆರ್ಚಕರು ಪೂಜಿಸುತ್ತಾರೆ. ಜೈನ ಪರಂಪರೆಯವರು ನೇತೃತ್ವ ವಹಿಸುತ್ತಾರೆ. ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಶಿಕ್ಷಣ, ಆರೋಗ್ಯದ ಕಾಳಜಿಯನ್ನು ಆಧರಿಸಿ ಹೊಗಳಿದ್ದೇನೆ ಎಂದು ತಿಳಿಸಿದರು.
ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಅಥವಾ ವಿಚಾರಣೆ ಇಲ್ಲದೆ ಗಲ್ಲಿಗೇರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನುಮುಂದೆಯೂ ಇದನ್ನು ಮುಂದುವರೆಸಿದರೆ ನಾವು ಬಿಡುವುದಿಲ್ಲ. ಸಜ್ಜನರ ಮೌನ ದುರ್ಜನರಿಗೆ ದಾರಿಯಾಗುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.