ಶಿವಮೊಗ್ಗ: ನಮ್ಮ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಎಲ್ಲ ಸವಲತ್ತು ಕೊಡುತ್ತದೆ. ಯಾವುದೇ ಕಾರಣಕ್ಕೂ ಸಲವತ್ತು ಕೊಡುವುದಕ್ಕೆ ಹಿಂಜರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ,ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸಿಎಂ ಸಿದ್ದರಾಮಯ್ಯ ಎಲ್ಲೇ ಭಾಷಣಕ್ಕೆ ಹೋದರೂ ,ನಮ್ಮ ಕಾಂಗ್ರೆಸ್ ಸರ್ಕಾರ ,ಸರ್ವಜನಾಂಗದ ಶಾಂತಿಯ ತೋಟ ಎಂದು ಭಾಷಣ ಮಾಡುತ್ತಾರೆ. ಆದ್ರೆ ವಾಸ್ತವವಾಗಿ ನೋಡಿದ್ರೆ, ಅವರು ಬರೀ ಒಂದು ಧರ್ಮದ ಓಲೈಕೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸವಲತ್ತು ಕೊಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಹಿಂದು ಯುವತಿ ನೇಹಾ ಹಿರೇಮಠ ಹತ್ಯೆಯಾದಾಗ, ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಇದು ಲವ್ ಜಿಹಾದ್ ಅಲ್ಲ, ವೈಯಕ್ತಿಕ ಕೊಲೆ ಎಂದು ಹಗುರವಾಗಿ ಹೇಳಿದ್ದರು. ಯಾವಾಗ ಹುಬ್ಬಳ್ಳಿ ಸೇರಿದಂತೆ ಬೇರೆ ಬೇರೆ ಕಡೆ ಪ್ರತಿಭಟನೆ ಕಾವು ಜೋರಾಯ್ತೋ, ಆವಾಗ ಎಚ್ಚೆತ್ತುಕೊ೦ಡು ಈ ಪ್ರಕರಣವನ್ನ ಸಿಐಡಿ ತನಿಖೆಗೆ ಕೊಟ್ಟರು. ತನಿಖೆ ಆಗೋದಕ್ಕಿಂತ ಮುಂಚೆಯೇ ಸಚಿವರು ಈ ರೀತಿ ಹೇಳಿಕೆ ಕೊಟ್ಟರೆ, ಸಿಐಡಿ ಸಂಸ್ಥೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ಹೇಗೆ ಕೊಡಲು ಸಾಧ್ಯ ? ಹೀಗಾಗಿ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.