ನವದೆಹಲಿ; ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿ ಎಂದು ಕರ್ನಾಟಕದ ಸ್ವಾಮೀಜಿಗಳ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದೆ.
ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಎನ್ಐಎ ತನಿಖೆಗೆ ವಹಿಸುವಂತೆ ಮನವಿ ಸಲ್ಲಿಸಿದೆ. ಕೇವಲ ಧರ್ಮಸ್ಥಳ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರದ ಅಪಪ್ರಚಾರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅಲ್ಲದೇ ಶಬರಿಮಲೆ, ತಿರುಪತಿ ಬಳಿಕ ಇದೀಗ ಧರ್ಮಸ್ಥಳ ಟಾರ್ಗೆಟ್ ಎಂದು ಗೃಹ ಸಚಿವರ ಮುಂದೆ ಸ್ವಾಮೀಜಿಗಳು ಬೇಸರ ಹೊರ ಹಾಕಿದ್ದಾರೆ.

ಈ ವೇಳೆ ಧರ್ಮಸ್ಥಳ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನು ನಾನೇ ಖುದ್ದಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಸ್ವಾಮೀಜಿಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ಸಚಿವ ಸಂಪುಟ ಸಭೆ ನಡೆಸಲಿದೆ. ಧರ್ಮ ಕ್ಷೇತ್ರಗಳ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರುತ್ತೇವೆ. ನೀವು ಸಮಾಜವನ್ನ ಜಾಗೃತಿಗೊಳಿಸಿ ಎಂದು ಸ್ವಾಮೀಜಿಗಳ ಬಳಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಸ್ವಾಮೀಜಿಗಳಿಂದ ಸುಮಾರು ಒಂದು ಗಂಟೆಗಳ ಕಾಲ ಮಾಹಿತಿ ಪಡೆದಿದ್ದಾರೆ.
