ಕೊಪ್ಪ: ತಾಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಕೆರೆ ಪ್ರದೇಶದ ಕೆರೆಮನೆಯಲ್ಲಿ ಎರಡು ಅಪರೂಪದ ಸ್ಮಾರಕಶಿಲ್ಪಗಳು ಶಾಂತ ಶ್ರೀನಿವಾಸ ಗೌಡ ಮತ್ತು ಕೆರೆಮನೆ ಸುರೇಶ ಅವರ ಜಮೀನಿನಲ್ಲಿ ಕಂಡುಬಂದಿದೆ.
ಶಾಂತ ಶ್ರೀನಿವಾಸ ಗೌಡ ಅವರು ತಮ್ಮ ಜಮೀನಿನ ಕೆಲಸದ ಸಂದರ್ಭದಲ್ಲಿ ಒಂದು ಸ್ಮಾರಕಶಿಲ್ಪವನ್ನು ಹೊರತೆಗೆದು ಇದರ ಮಾಹಿತಿಯನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರಿಗೆ ತಿಳಿಸಿರುತ್ತಾರೆ. ಕ್ಷೇತ್ರಕಾರ್ಯ ಶೋಧನೆಗೆ ತೆರಳಿದ ಸಂಶೋಧನಾರ್ಥಿಗೆ ಕೆರೆಮನೆ ಸುರೇಶ ಅವರ ಜಮೀನಿನಲ್ಲಿ ಗಿಡ-ಗಂಟಿಗಳಿಂದ ಮುಚ್ಚಿ ಹೋಗಿದ್ದ ಇನ್ನೊಂದು ಸ್ಮಾರಕಶಿಲ್ಪವು ದೊರೆಯುತ್ತಿದೆ. ಇವುಗಳನ್ನು ಸ್ವಚ್ಛಗೊಳಿಸಿ, ಅಧ್ಯಯನಕ್ಕೆ ಒಳಪಡಿಸಿದಾಗ ಇವುಗಳು ಒಂದೇ ರೀತಿಯ ಸಾಮ್ಯತೆಯನ್ನು ಹೊಂದಿರುವುದು ತಿಳಿದುಬಂದಿದೆ.
ಈ ಸ್ಮಾರಕಶಿಲ್ಪಗಳು ಸುಮಾರು ಎರಡು ಅಡಿ ಎತ್ತರ ಹಾಗೂ ಒಂದು ಅಡಿ ಅಗಲವಾಗಿದ್ದು, ಇವುಗಳು ಒಂದಕ್ಕೊಂದು ಸುಮಾರು 300 ಮೀಟರ್ ಅಂತರದಲ್ಲಿದೆ. ಮುಖ್ಯವಾಗಿ ಈ ಸ್ಮಾರಕಶಿಲ್ಪದ ಮಧ್ಯಭಾಗದಲ್ಲಿ ತ್ರಿಶೂಲ ಹಾಗೂ ಇದರ ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದ್ದು, ಇಡೀ ಕೊಪ್ಪ ತಾಲೂಕಿನಲ್ಲಿಯೇ ಇವುಗಳು ಪ್ರಥಮವಾಗಿ ಕಂಡುಬಂದಿರುವ ಅಪರೂಪದ ಸ್ಮಾರಕಶಿಲ್ಪಗಳಾಗಿದೆ. ಈ ಶಿಲ್ಪ ಲಕ್ಷಣದ ಹೋಲಿಕೆಯನ್ನು ಹೊಂದಿರುವ 15ನೇ ಶತಮಾನದ ದಾನ ಶಾಸನವೊಂದು ಕಡಬ ತಾಲೂಕಿನ ಬಳ್ಪ ಪ್ರದೇಶದಲ್ಲಿನ ಶ್ರೀ ದುರ್ಗಾ ದೇವಾಲಯದ ಒಳ ಪ್ರಕಾರದಲ್ಲಿ ಕಂಡುಬರುತ್ತದೆ. ಆದರೆ ಇದರಲ್ಲಿ ಸೂರ್ಯ-ಚಂದ್ರರ ಬದಲು ಶಂಖ-ಚಕ್ರದ ಕೆತ್ತನೆಯನ್ನು ಕಾಣಬಹುದು.
ಕಲ್ಕೆರೆ ಪ್ರದೇಶದ ಅರಣ್ಯದಲ್ಲಿ ಕಲ್ಲಿನ ಪ್ರಾಚೀನ ತಳಪಾಯ ಕಂಡು ಬಂದಿದ್ದು, ಇದು ದೇವಿ ಸಂಬಂಧಿಸಿದ ದೇವಾಲಯದ ನೆಲೆಗಟ್ಟು ಎಂಬುದು ಇಂದಿಗೂ ಸ್ಥಳೀಯರ ನಂಬಿಕೆಯಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಒಳಪಡಿಸಲಾದ ಈ ಸ್ಮಾರಕಶಿಲ್ಪಗಳು 14-15ನೇ ಶತಮಾನದಲ್ಲಿ ಹಾಕಿರಬಹುದಾದಂತಹ ಗಡಿಕಲ್ಲು ಆಗಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.