ಉಡುಪಿ: ಆರ್ಎಸ್ಎಸ್ ಧ್ವಜ ಪ್ರದರ್ಶಿಸಿದ ಜಿಲ್ಲಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
‘ಜ.18ರಂದು ಮುಂಜಾನೆ 3 ಗಂಟೆಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಪರ್ಯಾಯ ಮೆರವಣಿಗೆ ನಡೆದಿದ್ದು, ಮೆರವಣಿಗೆ ಆರಂಭಕ್ಕೂ ಮೊದಲು ಶಾಸಕ ಯಶ್ಪಾಲ್ ಸುವರ್ಣ ಅವರು ಆರ್ಎಸ್ಎಸ್ ಧ್ವಜವನ್ನು ಜಿಲ್ಲಾಧಿಕಾರಿ ಕೈಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರು ಆ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ, ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಅವರ ನಡೆ ಸರ್ಕಾರಿ ಸೇವಾ ನಿಯಮಗಳು ಮತ್ತು ಸಂವಿಧಾನದ ಧರ್ಮ ನಿರಪೇಕ್ಷ ತತ್ವಗಳಿಗೆ ವಿರುದ್ಧವಾಗಿದ್ದು, ಈ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ. ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ‘ನಾನು ಪ್ರದರ್ಶಿಸಿದ್ದು ಭಗವಾಧ್ವಜವಾಗಿದ್ದು, ಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಅಂತಹ ಧ್ವಜವನ್ನು ಬಳಸುತ್ತಾರೆ. ಯಾವುದೇ ರಾಜಕೀಯ ಪ್ರೇರಿತವಾಗಿ ನಾನು ಭಾಗವಹಿಸಿಲ್ಲ’ ಎಂದಿದ್ದಾರೆ.ಪರ್ಯಾಯ ಮೆರವಣಿಗೆಗೆ ಸಾಮಾನ್ಯವಾಗಿ ಉಡುಪಿ ನಗರಸಭೆಯ ಅಧ್ಯಕ್ಷರು ಚಾಲನೆ ನೀಡುತ್ತಾರೆ. ಈಗ ನಗರಸಭೆಗೆ ಆಡಳಿತ ಮಂಡಳಿ ಇಲ್ಲ. ನಗರಸಭೆಯ ಆಡಳಿತಾಧಿಕಾರಿಯಾಗಿ ನಾನು ಚಾಲನೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
