ಉಡುಪಿ: ಗುರುವಾರದಿಂದ ಉಡುಪಿ ಪ್ರವಾಸದಲ್ಲಿರುವ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಇಂದು ಬೆಳಗ್ಗಿನಿಂದಲೇ ಹಲವು ಕಡೆ ದಿಡೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಜೊತೆಗೆ ಬೆಳಗ್ಗೆ ಏಳು ಗಂಟೆಯಿಂದ ಸರಕಾರಿ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಉಡುಪಿ ತಾಲೂಕು ಕಚೇರಿಯಲ್ಲಿ ಸುಮಾರು ಒಂದು ತಾಸು ವಿವಿಧ ಇಲಾಖೆಗಳ ಕಡತಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಹಲವು ಲೋಪಗಳು ಕಂಡುಬಂದವು. ಮುಖ್ಯವಾಗಿ ತಾಲೂಕು ಕಚೇರಿ ಸಿಬ್ಬಂದಿ ಕಚೇರಿಗೆ ಬರುವ ಸಮಯವನ್ನು ಸೂಕ್ತ ರೀತಿಯಲ್ಲಿ ಹಾಜರಾತಿ ಪುಸ್ತಕದಲ್ಲಿ ದಾಖಲು ಮಾಡುತ್ತಿರಲಿಲ್ಲ.ಈ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಬ್ಬಂದಿಯೊಬ್ಬ ತನ್ನ ಬ್ಯಾಗ್ ನಲ್ಲಿ ಹಲವು ಕಡತಗಳನ್ನು ಇಟ್ಟುಕೊಂಡಿದ್ದ.ಇದನ್ನು ಪರಿಶೀಲಿಸಿದ ಉಪಲೋಕಾಯುಕ್ತರು , ನೀನೇನು ಇಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದಿಯಾ ಅಥವಾ ಸರಕಾರಿ ಕೆಲಸ ಮಾಡುತ್ತಿದ್ದಿಯಾ ಎಂದು ತರಾಟೆಗೆ ತೆಗೆದುಕೊಂಡರು.ಆತನ ವಿರುದ್ಧ ಕೇಸ್ ದಾಖಲಿಸಿಕೊಳ್ಳುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದರು.
ಅದೇ ರೀತಿ ತಾಲೂಕು ಕಚೇರಿಯ ವಿವಿಧ ಇಲಾಖೆಗಳಿಗೆ ತೆರಳಿ ಪರಿಶೀಲನೆ ನಡೆಸಿದ ಉಪಲೋಕಾಯುಕ್ತರು ಹಲವು ಲೋಪಗಳನ್ನು ಪತ್ತೆಹಚ್ಚಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ,ಉಡುಪಿ ಜಿಲ್ಲೆಯ ಸರಕಾರಿ ನೌಕರರು ,ಬುದ್ದಿವಂತ ಮೋಸಗಾರರಾಗಿದ್ದಾರೆ.ನಾನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ.ಆದರೆ ಇಲ್ಲಿಯವರು ಬುದ್ಧಿವಂತರು ,ಆದರೆ ಯಾಮಾರಿಸ್ತಾರೆ.ಸೂಕ್ತ ಉತ್ತರ ಕೊಡುವುದಿಲ್ಲ. ಕರ್ತವ್ಯ ಲೋಪ ಮತ್ತು ತಪ್ಪು ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದೇನೆ ಎಂದರು.
