ಉಡುಪಿ: ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಜೈಲು ಸೇರಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಇಂದು ಮಹತ್ವದ ದಿನವಾಗಿದೆ. ಗುರುವಾರ ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನ ವಶಕ್ಕೆ ಪಡೆದು ಬಳಿಕ ಅರೆಸ್ಟ್ ಮಾಡಿದ್ದರು. ನಂತರ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹಿರಿಯಡ್ಕ ಸಬ್ ಜೈಲಿನಲ್ಲಿರುವ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ಬ್ರಹ್ಮಾವರ ಪೊಲೀಸರು ಮಹೇಶ್ ತಿಮರೋಡಿಯನ್ನು ಬಂಧಿಸಿ ಆನಂತರ ಹೈಡ್ರಾಮಾ ನಡೆದು ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಹಿರಿಯಡ್ಕ ಸಬ್ ಜೈಲಿನಲ್ಲಿರುವ ಮಹೇಶ್ ತಿಮರೋಡಿ ಪ್ರತ್ಯೇಕ ಸೆಲ್‌ನಲ್ಲಿ ಚಡಪಡಿಸುತ್ತಾ ಎರಡು ದಿನ ಕಳೆದಿದ್ದಾರೆ. ತಿಮರೋಡಿ ಭೇಟಿಗೆ ಬಂದ ಬೆಂಬಲಿಗರಿಗೆ ಅವಕಾಶವೂ ಸಿಕ್ಕಿಲ್ಲ. ಬಿಪಿ ಏರುಪೇರು ಆದ ಕಾರಣ ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಲಾಗಿದೆ.
