ಹಾಸನ: ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿಗೆ ಎಸೆದು, ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿದ್ದ ಪತ್ನಿ, ಪ್ರಿಯಕರ ಹಾಗೂ ಅತ್ತೆಯನ್ನು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೋಹನ್ ಕುಮಾರ್ (29), ಭವ್ಯ (26), ಜಯಂತಿ (50) ಎಂದು ಗುರುತಿಸಲಾಗಿದೆ. ಜು.5 ರಂದು ಹಾಸನದ ಹೂವಿನಹಳ್ಳಿ ಕಾವಲು ಬಳಿಯ ಹಾಸನ-ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧು (36) ಶವ ಪತ್ತೆಯಾಗಿತ್ತು. ಮಗನ ಸಾವಿನ ಬಗ್ಗೆ ಅನುಮಾನಗೊಂಡು ಮಧು ತಾಯಿ ರುಕ್ಮಿಣಿ, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ ಮೃತನ ಪತ್ನಿ ಭವ್ಯ ಹಾಗೂ ಆಕೆಯ ತಾಯಿ ಜಯಂತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಎರಡು ವರ್ಷಗಳಿಂದ ಆಟೋ ಚಾಲಕ ಮೋಹನ್‍ಕುಮಾರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ.
ಮೋಹನ್‍ಕುಮಾರ್ ಜು.4ರಂದು ಗಾರೆ ಕೆಲಸಕ್ಕೆ ಹೋಗಿದ್ದ ಮಧುವನ್ನು ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದ. ಬಳಿಕ ಆಟೋದಲ್ಲಿದ್ದ ಬಟ್ಟೆಗಳಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ರಸ್ತೆ ಬದಿಯಲ್ಲಿ ಬಿಸಾಡಿ ಎಸ್ಕೇಪ್ ಆಗಿದ್ದ. ಕೊಲೆಗೈದ ಮೋಹನ್, ಸಂಚು ರೂಪಿಸಿ ಕುಮ್ಮಕ್ಕು ನೀಡಿದ್ದ ಮಧು ಪತ್ನಿ ಭವ್ಯ ಮತ್ತು ಅತ್ತೆ ಜಯಂತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ಹೆಚ್ಚಿನ ನಡೆಸುತ್ತಿದ್ದಾರೆ.