ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷಗೊಂಡಿದ್ದು, ಕಾಡಾನೆ ಕಂಡು ವಾಹನ ಸವಾರರು ಆತಂಕಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಕಾಡಾನೆ ಸಂಚಾರದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ..
ರಾತ್ರಿಯಿಂದಲೂ ರಸ್ತೆಯಲ್ಲಿ ಬೀಡುಬಿಟ್ಟಿರುವ ಕಾಡಾನೆ ಕಂಡು ವಾಹನ ಸವಾರರು ಭಯಭೀತರಾಗಿದ್ದಾರೆ. ರಸ್ತೆ ಮಧ್ಯೆಯೇ ಒಂಟಿಸಲಗ ನಿಂತಿರೋದ್ರಿಂದ ಸವಾರರು ಮುಂದೆ ಹೋಗಲಾಗದೇ ವಾಹನಗಳನ್ನು ದೂರದಲ್ಲಿ ನಿಲ್ಲಿಸಿದ್ದಾರೆ. ಇದ್ರಿಂದ ಕಿಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳೆದ ಕೆಲ ದಿನಗಳಿಂದ ಗಜರಾಜ ಚಾರ್ಮಾಡಿ ಘಾಟ್‌ನಲ್ಲಿ ಬೀಡು ಬಿಟ್ಟಿದ್ದು, ರಾತ್ರಿ ಹಗಲೆನ್ನದೇ ರಸ್ತೆಯಲ್ಲಿ ಸಂಚರಿಸುತ್ತಲೇ ಇದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ನಲ್ಲಿ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತಿರುತ್ತವೆ. ಆದ್ರೆ ಹೀಗೆ ಪದೇ ಪದೇ ದಿಢೀರ್ ಕಾಡಾನೆ ಪ್ರತ್ಯಕ್ಷವಾಗ್ತಿದ್ದು ಸವಾರರು ಕಾಡಾನೆ ದಾಳಿಯ ಭೀತಿಯ ನಡುವೆಯೇ ಓಡಾಡುವಂತಾಗಿದೆ. ಇನ್ನು ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೇ ಅಂತಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.