ಶೃಂಗೇರಿ: ತಾಲೂಕಿನ ಕೆರೆಕಟ್ಟೆಯಲ್ಲಿ ಮತ್ತೆ ಕಾಡಾನೆ ಭೀತಿ ಎದುರಾಗಿದೆ. ಒಂದು ಕಾಡಾನೆ ಸೆರೆಯಾಗ್ತಿದ್ದಂತೆ ಮತ್ತೊಂದು ಕಾಡಾನೆ ಈ ಭಾಗದಲ್ಲಿ ಸಂಚಾರ ಆರಂಭಿಸಿದೆ. ಹಿಂದಿನ ಘಟನೆ ಮಾಸುವ ಮುನ್ನವೇ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು ಜನರ ನೆಮ್ಮದಿ ಇನ್ನಷ್ಟು ಹಾಳುಮಾಡಿದೆ.
ವಾರದ ಹಿಂದೆ ಕೆರೆಕಟ್ಟೆಯಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದೀಗ ಅದೇ ಕೆರೆಕಟ್ಟೆ ಸುತ್ತಮುತ್ತ ಮತ್ತೊಂದು ಒಂಟಿ ಸಲಗ ಸಂಚಾರ ಆರಂಭಿಸಿದೆ. ಹೀಗಾಗಿ ಶೃಂಗೇರಿಯ ಕೆರೆಕಟ್ಟೆ, ಹುಲುಗಾರು ಬೈಲ್ ಭಾಗದಲ್ಲಿ ಮತ್ತೆ ಕಾಡಾನೆ ಭೀತಿ ಎದುರಾಗಿದೆ.
ಹುಲುಗಾರು ಬೈಲಿನಲ್ಲಿ ಬೈನೆ ಮರವನ್ನ ಕಾಡಾನೆ ಧ್ವಂಸ ಮಾಡಿ ಹಾಕಿದೆ. ಬೈನೆ ಮರವನ್ನು ಆನೆ ಉರುಳಿಸಿದ ವೇಳೆ ಮರ ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಮುರಿದು ಬಿದ್ದಿದೆ. ಹೀಗಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದೇ ಜಾಗದಲ್ಲೇ ನಿತ್ಯ ಮಕ್ಕಳು ಜನರು ಓಡಾಡುತ್ತಾರೆ. ಇದೀಗ ಇದೇ ಪ್ರದೇಶದಲ್ಲಿ ಕಾಡಾನೆ ಸಂಚಾರ ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಹುಲುಗಾರು ಬೈಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
