ಕೊಪ್ಪ/ ಶೃಂಗೇರಿ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ದಾಳಿಗೆ ಹಲವು ಜೀವ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳಾದ ನರಸಿಂಹರಾಜಪುರ, ಬಾಳೆಹೊನ್ನೂರು, ಖಾಂಡ್ಯ, ಕೊಪ್ಪ, ಮೂಡಿಗೆರೆ ಭಾಗದ ಜನರು ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಜೀವಭಯದಿಂದ ಕೃಷಿ ತೋಟಗಳಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ.
ಸ್ಪಲ್ಪ ದಿನದ ಹಿಂದೆ ಶೃಂಗೇರಿ, ಅಡ್ಡಗದ್ದೆ, ಹೊಸಕೊಪ್ಪ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿಯ ಬಿಲಗದ್ದೆಯಲ್ಲಿ ಕಾಣಿಸಿಕೊಂಡಿದೆ.
ಮನುಷ್ಯನ ಜೀವನದಲ್ಲಿ ಆಟವಾಡುತ್ತಿರುವ ಕಾಡಾನೆಗಳಿಗೆ ಕಡಿವಾಣ ಹಾಕುವವರು ಯಾರು ಎನ್ನುವ ಯಕ್ಷ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದ್ದು, ಕಾಡಾನೆ ದಾಳಿಯಿಂದ ಅಮಾಯಕರು ಮೃತಪಟ್ಟಾಗ ಮಾತ್ರ ಸ್ಥಳಕ್ಕೆ ಬರುವ ಜನಪ್ರತಿನಿಧಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಫಿ ತೋಟದಲ್ಲಿ ಗಜಪಡೆ ಬೀಡು ಬಿಡುತ್ತಿದ್ದು, ಪ್ರಾಣ ಭಯದಿಂದ ಕಾಫಿ ತೋಟಕ್ಕೆ ಕೆಲಸಗಾರರಾಗಲಿ, ಮಾಲೀಕರಾಗಲಿ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಗದ್ದೆಗಲಲ್ಲಿ ಕಾಡಾನೆಗಳು ತುಳಿದು ನಾಶ ಮಾಡುವ ಆತಂಕದಲ್ಲಿದ್ದಾರೆ. ಹಲವು ವರ್ಷದಿಂದ ಬೆಳಿದಿದ್ದ ಕಾಫಿ ಗಿಡಗಳನ್ನು ನಾಶ ಮಾಡುತ್ತಿವೆ. ಸದ್ಯ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಹಾನಿಯನ್ನು ತಡೆಗಟ್ಟಲು ಆನೆಯನ್ನು ಕಾಡಿಗೆ ಓಡಿಸಲು ಶತಪ್ರಯತ್ನ ಮಾಡುತ್ತಿದೆ.
ಬಾಳೆಹೊನ್ನೂರು, ನರಸಿಂಹರಾಜಪುರ, ಮೂಡಿಗೆರೆ, ಕೊಪ್ಪ ಭಾಗದಲ್ಲಿ ಆನೆಗಳ ಉಪಟಳಕ್ಕೆ ರೈತರು, ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಇದೆ. ಹಲವು ಕಾರ್ಮಿಕರು, ರೈತರು ಸಹ ಆನೆ ದಾಳಿಗೆ ಬಲಿಯಾಗಿದ್ದಾರೆ, ಈಗ ಶೃಂಗೇರಿ ಭಾಗದಲ್ಲೂ ಒಂಟಿ ಆನೆ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಒಂಟಿ ಆನೆ ಆಗಿರುವುದರಿಂದ ನಿರ್ಲಕ್ಷ್ಯ ವಹಿಸಿದಲ್ಲಿ ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ, ಹಾಗೆಯೇ ಇತರೆ ಭಾಗದ ಆನೆಗಳು ಸಹ ಇತ್ತ ಬರಬಹುದಾದ ಸಾಧ್ಯತೆಗಳು ಇದೆ. ಈ ಎಲ್ಲಾ ಆತಂಕಗಳನ್ನು ಅರಣ್ಯ ಇಲಾಖೆ ಕ್ಷೀಪ್ರ ಕ್ರಮ ವಹಿಸಿ ಬಗೆಹರಿಸಬೇಕು.
ಒಂಟಿ ಆನೆ ಆಗಿರುವುದರಿಂದ ನಿರ್ಲಕ್ಷ್ಯ ವಹಿಸಿದಲ್ಲಿ ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ, ಹಾಗೆಯೇ ಇತರೆ ಭಾಗದ ಆನೆಗಳು ಸಹ ಇತ್ತ ಬರಬಹುದಾದ ಸಾಧ್ಯತೆಗಳು ಇದೆ. ಈ ಎಲ್ಲಾ ಆತಂಕಗಳನ್ನು ಅರಣ್ಯ ಇಲಾಖೆ ಕ್ಷೀಪ್ರ ಕ್ರಮ ವಹಿಸಿ ಬಗೆಹರಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ತಾರೊಳ್ಳಿ ಕೊಡಿಗೆ ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಒಂಟಿ ಆನೆಯೊಂದು ಆಗಾಗ್ಗೆ ಸಂಚರಿಸುತ್ತಿದ್ದು ಬೆಳೆ ನಾಶ ಮಾಡುತ್ತಿದೆ, ಅದನ್ನೂ ಸ್ಥಳಾಂತರ ಮಾಡಬೇಕು ಹಾಗೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶೃಂಗೇರಿ, ಪ್ರಧಾನ ಕಾರ್ಯದರ್ಶಿ, ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ರಂಜಿತ್ ಅವರು ಮನವಿ ಮಾಡಿದ್ದಾರೆ.
ವರದಿ: ಶಾಲಿನಿ ಪಿ ಗೌಡ
