ಮಡಿಕೇರಿ: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಮೊದಲ ಹಂತದಲ್ಲಿ ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪದವಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಮೂಲಕ ಫಲಿತಾಂಶ ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಕೊಡಗು ವಿಶ್ವವಿದ್ಯಾಲಯ ಪಾತ್ರವಾಗಿದೆ.

ಕೊಡಗು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ದಿ:25.01.2024 ರಿಂದ ಆರಂಭಗೊಂಡು ಬಿಎ ಪದವಿಯ ಕೊನೆಯ ಪರೀಕ್ಷೆಯು ದಿ:04.03.2024 ರಂದು ಪೂರ್ಣಗೊಂಡಿದೆ. ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಎಫ್‌ಎಂಕೆಎಂಸಿ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸಿದ್ಧಪಡಿಸಿಕೊಂಡು, ಜಿಲ್ಲೆಯ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಮೌಲ್ಯಮಾಪಕರು ಬಹು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಸ್ನಾತಕ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ. 2023-2024ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ನಮ್ಮ ಕೊಡಗು ವಿಶ್ವವಿದ್ಯಾಲಯವು ಭಾಜನವಾಗಿದೆ.