ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ತುಂಬಿರಬೇಕೆಂಬ ಕಡ್ಡಾಯ ನಿಯಮದಲ್ಲಿ ಸರ್ಕಾರ ಈ ವರ್ಷವೂ 60 ದಿನಗಳ ವಿನಾಯಿತಿ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ.

ವಿಧಾನಸಭೆಯಲ್ಲಿಂದು ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ ಮಾಡಿದರು. ಒಂದನೇ ತರಗತಿಗೆ ದಾಖಲಾಗಲು ಆರು ವರ್ಷ ತುಂಬಿರಬೇಕೆಂಬ ನಿಯಮದಲ್ಲಿ 2026-27 ನೇ ವರ್ಷದ ಶೈಕ್ಷಣಿಕ ವರ್ಷದಲ್ಲಿ 60 ದಿನಗಳ ಸಡಿಲಿಕೆ ಕೊಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಈ ನಿರ್ಧಾರದಿಂದ 5 ವರ್ಷ 10 ತಿಂಗಳು ಅಥವಾ ಅದರ ಮೇಲೆ ವಯಸ್ಸಾಗಿರುವ ಮಕ್ಕಳೂ ಸಹ ಈ ವರ್ಷ ಒಂದನೇ ತರಗತಿಗೆ ದಾಖಲಾಗಬಹುದು. ಈ ಸಡಿಲಿಕೆ ಎಲ್ಕೆಜಿ, ಯುಕೆಜಿ, ಒಂದನೇ ತರಗತಿಗೆ ಅನ್ವಯವಾಗಲಿದೆ.
