ಇತ್ತೀಚಿನ ದಿನಗಳಲ್ಲಿ ನಾವು ಎಷ್ಟು ಕಾರ್ಯನಿರತರಾಗಿದ್ದೇವೆ ಎಂದರೆ, ಆರೋಗ್ಯಕ್ಕಾಗಿ ಸಮಯ ಮೀಸಲಿಡುವುದು ಒಂದು ದೊಡ್ಡ ಸವಾಲಾಗಿದೆ. ಒತ್ತಡದ ಜೀವನಶೈಲಿ, ಬೆನ್ನು ನೋವು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಸಾಮಾನ್ಯವಾಗಿದೆ.
ದಿನವಿಡೀ ಓಡಾಡಲು ಶಕ್ತಿ ಬೇಕು, ಆದರೆ ಯೋಗ ಮಾಡಲು ಗಂಟೆಗಳ ಕಾಲಾವಕಾಶ ಇಲ್ಲವಲ್ಲಾ ಎಂದು ಚಿಂತಿಸುತ್ತಿರುವವರಿಗೆ, ಒಂದು ಸುಲಭ ಪರಿಹಾರ ಇಲ್ಲಿದೆ!
ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಕೇವಲ ಪ್ರತಿದಿನ ಬೆಳಿಗ್ಗೆ 5 ನಿಮಿಷಗಳ ಕಾಲ ‘ಬಾಲಾಸನ’ ಅಭ್ಯಾಸ ಮಾಡಿದರೆ ಅದ್ಬುತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಮನಸ್ಸಿಗೆ ಶಾಂತಿ, ಒತ್ತಡಕ್ಕೆ ವಿದಾಯ!
ಇಂದು ಬಹಳಷ್ಟು ಜನ ಒತ್ತಡ ಮತ್ತು ಆತಂಕದಿಂದ ಬಳಲುತ್ತಿದ್ದಾರೆ. ದಿನವಿಡೀ ಸುತ್ತುವರಿದಿರುವ ಚಿಂತೆಗಳಿಂದ ಮುಕ್ತಿ ಪಡೆಯಲು ಬಾಲಾಸನವು ಅತ್ಯಂತ ಪರಿಣಾಮಕಾರಿ. ಈ ಆಸನವನ್ನು ಮಾಡಿದಾಗ, ನಿಮ್ಮ ದೇಹ ಮತ್ತು ಮನಸ್ಸು ಸಂಪೂರ್ಣವಾಗಿ ಶಾಂತವಾಗುತ್ತದೆ. ಬೆಳಿಗ್ಗೆ 5 ನಿಮಿಷ ಈ ಭಂಗಿಯಲ್ಲಿದ್ದರೆ, ನಿಮ್ಮ ಒತ್ತಡ ಮತ್ತು ಆತಂಕ ಕಡಿಮೆಯಾಗಿ, ಮನಸ್ಸು ಹಗುರವಾಗುತ್ತದೆ. ಇದು ಖಿನ್ನತೆಯ ಲಕ್ಷಣಗಳಿಂದಲೂ ಪರಿಹಾರ ನೀಡಲು ಸಹಾಯ ಮಾಡುತ್ತದೆ.
ಬೆನ್ನು ನೋವಿನಿಂದ ಮುಕ್ತಿ
ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವವರಿಗೆ ಬೆನ್ನು ನೋವು, ಕುತ್ತಿಗೆ ನೋವು ಮತ್ತು ಭುಜದ ನೋವುಗಳು ಕಾಡುತ್ತವೆ. ಇಂತಹ ನೋವುಗಳಿಗೆ ಬಾಲಾಸನವು ಒಂದು ನೈಸರ್ಗಿಕ ನೋವು ನಿವಾರಕವಾಗಿದೆ. ಈ ಆಸನದಲ್ಲಿ ದೇಹವನ್ನು ಮುಂದಕ್ಕೆ ಬಾಗಿಸಿದಾಗ, ಸೊಂಟದ ಸ್ನಾಯುಗಳು ವಿಸ್ತರಿಸಲ್ಪಡುತ್ತವೆ. ಇದರಿಂದ ಬೆನ್ನು, ಕುತ್ತಿಗೆ ಮತ್ತು ಭುಜದ ಭಾಗಗಳಲ್ಲಿನ ಬಿಗಿತ ಕಡಿಮೆಯಾಗಿ, ನೋವು ನಿವಾರಣೆಯಾಗುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಗ್ಯಾಸ್ಟ್ರಿಕ್, ಮಲಬದ್ದತೆಯಂತಹ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬಾಲಾಸನವು ನಿಜಕ್ಕೂ ಒಂದು ವರದಾನ. ಈ ಆಸನವನ್ನು ಮಾಡುವಾಗ ಹೊಟ್ಟೆ ಭಾಗದ ಅಂಗಗಳು ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಪ್ರತಿದಿನ ಇದನ್ನು ಅಭ್ಯಾಸ ಮಾಡಿದರೆ ಗ್ಯಾಸ್, ಅಜೀರ್ಣ ಮತ್ತು ದೀರ್ಘಕಾಲದ ಮಲಬದ್ಧತೆಯಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ.
ರಕ್ತ ಪರಿಚಲನೆಗೆ ಉತ್ತಮ
ಬಾಲಾಸನದ ನಿಯಮಿತ ಅಭ್ಯಾಸವು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಈ ಆಸನದಿಂದಾಗಿ ಇಡೀ ದೇಹದಲ್ಲಿ ರಕ್ತ ಸಂಚಾರವು ಸುಧಾರಿಸುತ್ತದೆ. ಇದರಿಂದ ನಿಮ್ಮ ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಉತ್ತಮವಾಗಿ ತಲುಪಿ, ನೀವು ದಿನವಿಡೀ ಚೈತನ್ಯದಿಂದ ಕೂಡಿರುತ್ತೀರಿ ಮತ್ತು ಆಯಾಸ ಬೇಗನೆ ನಿಮ್ಮನ್ನು ಆವರಿಸುವುದಿಲ್ಲ.
ಕೇವಲ 5 ನಿಮಿಷದ ಬಾಲಾಸನವು ನಿಮ್ಮ ಆರೋಗ್ಯಕ್ಕೆ ಎಷ್ಟು ಅದ್ಭುತ ಪ್ರಯೋಜನಗಳನ್ನು ನೀಡುತ್ತೆ ಅಲ್ವಾ? ನೀವು ಕೂಡ ಇಂದಿನಿಂದಲೇ ಪ್ರತಿದಿನ ಬೆಳಿಗ್ಗೆ ಈ ಸುಲಭ ಆಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿ, ನಿಮ್ಮ ಆರೋಗ್ಯದಲ್ಲಾಗುವ ಅದ್ಭುತ ಬದಲಾವಣೆಯನ್ನು ನೀವೇ ನೋಡಿ.
