ಸಾಮಾನ್ಯವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಎಲ್ಲರೂ ಡಯಟ್ ಮಾಡುತ್ತಾರೆ. ಜಂಕ್ ಫುಡ್, ಕೊಬ್ಬಿನ ಪದಾರ್ಥಗಳನ್ನು, ಸಿಹಿತಿಂಡಿಗಳನ್ನು ತ್ಯಜಿಸುವುದು ಮತ್ತು ಅನ್ನ ಸೇವಿಸುವುದನ್ನು ಬಿಡುತ್ತಾರೆ. ಆದರೆ ಮಧ್ಯಂತರ ಉಪವಾಸ (Intermittent Fasting ) ದಲ್ಲಿ ಹಾಗಲ್ಲ. ನಾವು ದಿನಾಲೂ ಸೇವಿಸುವ ಆಹಾರವನ್ನೇ ಸೇವಿಸುತ್ತೇವೆ, ಆದರೆ ಸಮಯ ಬದಲಾಗುತ್ತದೆ. ಕೊಬ್ಬು ಕರಗಿಸಲು (Fat Loss) ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ನಿರ್ಧರಿಸಿದ್ದರೆ, ಮೂರು ತಿಂಗಳ ಕಾಲ ಇಂಟರ್ಮಿಟೆಂಟ್ ಫಾಸ್ಟಿಂಗ್ ಮತ್ತು ವಾಕಿಂಗ್ (Walking) ನಿಯಮವನ್ನು ಅನುಸರಿಸುವುದು ಪ್ರಯೋಜನಕಾರಿಯೇ? ಈ ಕುರಿತು ತಜ್ಞರ ಅಭಿಪ್ರಾಯ ಏನು, ತಿಳಿದುಕೊಳ್ಳಿ.
ಇಂಟರ್ಮಿಟೆಂಟ್ ಫಾಸ್ಟಿಂಗ್‌ನ ನಿಯಮಗಳು
ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂದರೆ ಒಂದು ದಿನದಲ್ಲಿ 16 ಗಂಟೆಗಳ ಕಾಲ ಉಪವಾಸವಿರುವುದು ಮತ್ತು ಉಳಿದ 8 ಗಂಟೆಗಳ ಕಾಲದಲ್ಲಿ ಮಾತ್ರ ಆಹಾರ ಸೇವಿಸುವುದು. ಉದಾಹರಣೆಗೆ, ಸಂಜೆ ಆರು ಗಂಟೆ ಒಳಗೆ ಊಟ ಮುಗಿಸಿ ಮರುದಿನ ಬೆಳಗ್ಗೆ 10 ಗಂಟೆಗೆ ತಿಂಡಿ ತಿಂದರೆ, ಒಟ್ಟು 16 ಗಂಟೆಗಳ ಉಪವಾಸ ಮಾಡಿದಂತಾಗುತ್ತದೆ. ಆದರೆ ಈ ಉಪವಾಸದ ಅವಧಿಯಲ್ಲಿ ಯಾವುದೇ ರೀತಿಯ ಆಹಾರವನ್ನು ಸೇವಿಸುವಂತಿಲ್ಲ; ಬರಿ ನೀರು ಮಾತ್ರ ಸೇವಿಸಬಹುದು. ಈ ಫಾಸ್ಟಿಂಗ್ ಸಮಯವನ್ನು ಅವರವರ ಆಫೀಸ್ ಕೆಲಸ ಮತ್ತು ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಸರಳವಾಗಿ ಹೇಳುವುದೆಂದರೆ, ಇದೊಂದು ತೂಕ ಇಳಿಸಿಕೊಳ್ಳಲು ಅನುಸರಿಸಬೇಕಾದ ಆಹಾರ ಕ್ರಮ. ಇಂಟರ್‌ಮಿಟೆಂಟ್ ಫಾಸ್ಟಿಂಗ್ ತೂಕ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ಜಡ ಜೀವನಶೈಲಿಯಿಂದ ಬರುವ ದೀರ್ಘಕಾಲೀನ ಕಾಯಿಲೆಗಳನ್ನು ತಡೆಯುತ್ತದೆ ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿರುವುದರಿಂದ ಇತ್ತೀಚಿಗೆ ಅನೇಕ ಜನರು ಇದನ್ನು ಅನುಸರಿಸುತ್ತಿದ್ದಾರೆ.
ಉಪವಾಸ ಮತ್ತು ವಾಕಿಂಗ್‌ನಿಂದ ಆಗುವ ಪ್ರಯೋಜನಗಳು
ಡಯೆಟಿಷಿಯನ್ ಗರಿಮಾ ಗೋಯಲ್ ಪ್ರಕಾರ, ಮೂರು ತಿಂಗಳ ಕಾಲ ನಿಯಮಿತ ವಾಕಿಂಗ್ ಜೊತೆಗೆ ಇಂಟರ್ಮಿಟೆಂಟ್ ಫಾಸ್ಟಿಂಗ್ ಮಾಡುವುದರಿಂದ ಮೆಟಾಬಾಲಿಸಂ (ಜೀವ ರಾಸಾಯನಿಕ ಕ್ರಿಯೆ), ಶಕ್ತಿ ಮತ್ತು ಒಟ್ಟಾರೆ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಈ ಎರಡೂ ಅಭ್ಯಾಸಗಳು ಒಂದಕ್ಕೊಂದು ಪೂರಕವಾಗಿವೆ. ಉಪವಾಸವು ಜೀರ್ಣಕ್ರಿಯೆಗೆ (Digestion) ವಿಶ್ರಾಂತಿ ನೀಡಿದರೆ, ವಾಕಿಂಗ್ ಕೊಬ್ಬು ಕಡಿಮೆ ಮಾಡಲು (Fat Burning) ಸಹಕಾರಿ ಆಗುತ್ತದೆ. ಸತತ ಮೂರು ತಿಂಗಳ ಅವಧಿಯಲ್ಲಿ ಕೊಬ್ಬು ಕರಗಿಸಿ (Fat Loss) ಮತ್ತು ಸುಧಾರಿತ ದೇಹವನ್ನು ಪಡೆಯಬಹುದು. ನಿರ್ದಿಷ್ಟ ಊಟದ ಸಮಯದಲ್ಲಿ ಮಾತ್ರ ಆಹಾರ ಸೇವಿಸುವುದರಿಂದ, ಇನ್ಸುಲಿನ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಮತ್ತು ದೇಹವು ಸಂಗ್ರಹವಾದ ಕೊಬ್ಬನ್ನು ಶಕ್ತಿಗಾಗಿ ಬಳಸಲು (Fat Mobilisation) ಶುರುಮಾಡುತ್ತದೆ. ವಾಕಿಂಗ್ ಸೇರಿಸುವುದರಿಂದ ಕ್ಯಾಲೋರಿ ಖರ್ಚು ಹೆಚ್ಚುತ್ತದೆ ಮತ್ತು ಸ್ನಾಯುಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಈ ಸಂಯೋಜನೆಯಿಂದ ಸೊಂಟದ ಸುತ್ತಳತೆ (Waist Circumference) ಕಡಿಮೆಯಾಗಿ, ದೇಹಕ್ಕೆ ಹೆಚ್ಚು ಲವಲವಿಕೆಯ (Energised) ಭಾವನೆ ಬರುತ್ತದೆ.
ನಿಯಮಿತ ವಾಕಿಂಗ್ ರಕ್ತ ಸಂಚಾರ (Blood Circulation) ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ಹಾಗೂ ಸಕ್ಕರೆ ಮಟ್ಟವನ್ನು (Blood Sugar Levels) ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಉಪವಾಸವು ಜೀರ್ಣಾಂಗ ವ್ಯವಸ್ಥೆಯನ್ನು ಮರುಹೊಂದಿಸಲು ಅನುಮತಿಸುತ್ತದೆ, ಉತ್ತಮ ಹಸಿವಿನ ನಿಯಂತ್ರಣವನ್ನು ಉತ್ತೇಜಿಸುತ್ತದೆ. ಉಪವಾಸದಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರಕಿ ಅವು ಮತ್ತಷ್ಟು ಸಮರ್ಥವಾಗುತ್ತವೆ. ಹೊಟ್ಟೆ ಉಬ್ಬುವುದು (Bloating) ಕಡಿಮೆಯಾಗಿ, ಉತ್ತಮ ಜೀರ್ಣಕ್ರಿಯೆ ಮತ್ತು ಸುಧಾರಿತ ನಿದ್ರೆಯ ಗುಣಮಟ್ಟ (Sleep Quality) ಹೆಚ್ಚುತ್ತದೆ. ಅಲ್ಲದೆ, ದೇಹದಲ್ಲಿ ಕೊಲೆಸ್ಟರಾಲ್ ಮಟ್ಟ ಸಮತೋಲನಗೊಳ್ಳುವುದು, ಇದರಿಂದ ಹೃದಯದ ಕಾಯಿಲೆಗಳು ಬರುವ ಸಂಭವ ಕಡಿಮೆ ಆಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದರಿಂದ ಡಯಾಬಿಟಿಸ್ ಬಗ್ಗೆ ಹೆದರಬೇಕಿಲ್ಲ. ಬಿಪಿ, ಫ್ಯಾಟಿ ಲಿವರ್, ಕಿಡ್ನಿ, ಥೈರಾಯಿಡ್ ಮತ್ತಿತರ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ.
ಮಾನಸಿಕ ಶಿಸ್ತು
ವಾಕಿಂಗ್ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ಒತ್ತಡವನ್ನು (Stress) ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂಟರ್ಮಿಟೆಂಟ್ ಫಾಸ್ಟಿಂಗ್‌ನ ರಚನಾತ್ಮಕ ದಿನಚರಿಯೊಂದಿಗೆ ಇದನ್ನು ಸಂಯೋಜಿಸಿದಾಗ, ಇದು ದಿನದ ಉಳಿದ ಅವಧಿಯವರೆಗೂ ಮುಂದುವರಿಯುವ ಶಿಸ್ತು ಮತ್ತು ಸಮತೋಲನದ (Discipline and Balance) ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ಉಪವಾಸದ ಅವಧಿಯಲ್ಲಿ ಮೆದುಳಿನಲ್ಲಿ ಹೊಸ ನರ ಜೀವಕೋಶಗಳ ಬೆಳವಣಿಗೆಗೆ ಉತ್ತೇಜನ ದೊರೆತು ಮೆದುಳು ಚುರುಕಾಗುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ. ದೇಹ ಹಗುರಾದ ಭಾವನೆ ಉಂಟಾಗಿ ಮೂಡ್ ಚೆನ್ನಾಗಿರುತ್ತದೆ.
ಮಧ್ಯಂತರ ಉಪವಾಸ ಮಾಡಲು ಸಾಧ್ಯವೇ?
ಇಂಟರ್ಮಿಟೆಂಟ್ ಫಾಸ್ಟಿಂಗ್‌ನಲ್ಲಿ ಹೀಗೆ ರಾತ್ರಿ ಬೇಗ ಮತ್ತು ಬೆಳಗ್ಗೆ ತಡವಾಗಿ ತಿನ್ನುವುದು ಸಾಧ್ಯವೇ ಎಂಬ ಪ್ರಶ್ನೆ ಬರುವುದು ಸಹಜ. ಕೇವಲ ಅಭ್ಯಾಸದಿಂದ ಮಾತ್ರ ಇದು ಸಾಧ್ಯ. ಆಸಕ್ತಿ ಇದ್ದವರು ಮೊದಲು 12 ಗಂಟೆಗಳ ಇಂಟರ್ಮಿಟೆಂಟ್ ಫಾಸ್ಟಿಂಗಿನಿಂದ ಆರಂಭಿಸಬೇಕು. ನಿರಂತರ ಅಭ್ಯಾಸದಿಂದ ನಿಧಾನವಾಗಿ ಈ ಕ್ರಮಕ್ಕೆ ಹೊಂದಿಕೊಳ್ಳಬಹುದು. ಪ್ರತಿದಿನ ಅಲ್ಲದಿದ್ದರೂ ವಾರಕ್ಕೆ ಎರಡು ದಿನ ಮಾಡಬಹುದು. ಇಂಟರ್ಮಿಟೆಂಟ್ ಫಾಸ್ಟಿಂಗ್ ನಮ್ಮ ದೇಹದ ಜೈವಿಕ ಗಡಿಯಾರ (ಸರ್ಕಾಡಿಯನ್ ರಿದಂ) ಮೇಲೆ ಪರಿಣಾಮ ಬೀರುತ್ತದೆ. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಂಡುಬರುತ್ತದೆ. ಕೆಲವರಿಗೆ ನಿರ್ದಿಷ್ಟ ಸಮಯದಲ್ಲಿಯೇ ಆಹಾರ ಸೇವಿಸಿ, ಅದರಲ್ಲಿಯೂ ಬಗೆಬಗೆಯ ತಿಂಡಿತಿನಿಸು ತಿನ್ನುವವರು, ಇದನ್ನು ಮಾಡಲಾರರು.
ಈ ದಿನಚರಿಯು ಸಮತೋಲಿತ ಊಟ (Balanced Meals), ಸಾಕಷ್ಟು ಪ್ರೋಟೀನ್, ಸಾಕಷ್ಟು ನೀರು ಕುಡಿಯುವುದು ಮತ್ತು ಸಾಕಷ್ಟು ನಿದ್ರೆಯೊಂದಿಗೆ ಬೆಂಬಲಿತವಾದಾಗ ಮಾತ್ರ ಪರಿಣಾಮಕಾರಿಯಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ. ಇಂಟರ್ಮಿಟೆಂಟ್ ಫಾಸ್ಟಿಂಗ್ ಎರಡು ಊಟಗಳ ನಡುವಿನ ಸಮಯವನ್ನು ಹೆಚ್ಚಿಸುತ್ತದೆಯೇ ಹೊರತು ಊಟದ ಪ್ರಮಾಣವನ್ನು ಬದಲಾಯಿಸುವುದಿಲ್ಲ. ಇದರಲ್ಲಿ ನಾವು ಏನನ್ನಾದರೂ ತ್ಯಜಿಸಬೇಕಾಗಿಲ್ಲ, ಆದ್ದರಿಂದ ಕಳೆದುಕೊಂಡಿದ್ದೇವೆ ಎಂಬ ಭಾವನೆ ಮನಸ್ಸಿನಲ್ಲಿ ಮೂಡುವುದೇ ಇಲ್ಲ.
ಎಚ್ಚರಿಕೆ: ಇಂಟರ್ಮಿಟೆಂಟ್ ಫಾಸ್ಟಿಂಗ್ ಎಲ್ಲರಿಗೂ ಸೂಕ್ತವಲ್ಲ, ವಿಶೇಷವಾಗಿ ವೈದ್ಯಕೀಯ ಪರಿಸ್ಥಿತಿಗಳಾದ ಹಾರ್ಮೋನುಗಳ ಅಸಮತೋಲನ (Hormonal Imbalances) ಅಥವಾ ಕಡಿಮೆ ಶಕ್ತಿಯ ಮಟ್ಟವನ್ನು ಹೊಂದಿರುವವರಿಗೆ ಇದು ಸೂಕ್ತವಲ್ಲ. ಕೆಲವರಿಗೆ ಉಪವಾಸ ಇದ್ದರೆ ಚಡಪಡಿಕೆ ಉಂಟಾಗಬಹುದು. ಪ್ರತಿಕೂಲ ಪರಿಣಾಮಗಳು ಕಂಡುಬಂದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಆಯಾಸ (Fatigue), ಪೋಷಕಾಂಶಗಳ ಕೊರತೆ ಅಥವಾ ಸ್ನಾಯು ನಷ್ಟವನ್ನು ತಡೆಯಲು ಸ್ಥಿರತೆ (Consistency) ಮತ್ತು ಪ್ರಜ್ಞಾಪೂರ್ವಕ ಪೋಷಣೆ (Mindful Nutrition) ಅತ್ಯಗತ್ಯ. ಒಟ್ಟಿನಲ್ಲಿ, ಮಧ್ಯಂತರ ಉಪವಾಸವನ್ನು ವಾಕಿಂಗ್‌ನೊಂದಿಗೆ ಸಂಯೋಜಿಸುವುದು ನಿಮ್ಮ ತೂಕ ಸಮತೋಲನ (Weight Balance) ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ.
