ಅಜೀರ್ಣದ ಸಮಸ್ಯೆಗೆ ಹಣ್ಣುಗಳ ಸೇವನೆ ಮೊದಲ ಪರಿಹಾರ. ಅದರಲ್ಲೂ ಪಪ್ಪಾಯಿ ಮತ್ತು ಕಿವಿ ಹಣ್ಣುಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಕಡಿಮೆ ಮಾಡಲು ಹೆಚ್ಚು ಹೆಸರುವಾಸಿಯಾಗಿರುವ ಹಣ್ಣುಗಳು. ಈ ಎರಡೂ ಹಣ್ಣುಗಳು ನೈಸರ್ಗಿಕ ಕಿಣ್ವಗಳನ್ನು (Enzymes) ಹೊಂದಿದ್ದರೂ, ಅವು ಕಾರ್ಯನಿರ್ವಹಿಸುವ ವಿಧಾನ ಬೇರೆಯಾಗಿರುತ್ತದೆ. ನಿಮ್ಮ ಜೀರ್ಣಕ್ರಿಯೆಗೆ ಯಾವುದು ಉತ್ತಮ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
ಪಪ್ಪಾಯಿ: ಇದು ಹೊಟ್ಟೆಗೆ ಹಿತವಾದ ಹಣ್ಣು. ಭಾರತೀಯ ಮನೆಗಳಲ್ಲಿ ಜೀರ್ಣಕ್ರಿಯೆಗಾಗಿ ದಶಕಗಳಿಂದ ಪಪ್ಪಾಯಿಯನ್ನು ಬಳಸಲಾಗುತ್ತಿದೆ. ಇದರಲ್ಲಿರುವ ‘ಪಪೈನ್’ (Papain) ಎಂಬ ಕಿಣ್ವವು ಪ್ರೋಟೀನ್ಗಳನ್ನು ಹೊಳು ಮಾಡಲು ಸಹಾಯ ಮಾಡುತ್ತದೆ. ಇದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ, ಗ್ಯಾಸ್ ಮತ್ತು ಸಾಧಾರಣ ಜೀರ್ಣಕಾರಿ ಸಮಸ್ಯೆ ಇರುವವರಿಗೆ ಪಪ್ಪಾಯಿ ತುಂಬಾ ಒಳ್ಳೆಯದು. ಇದು ಹೊಟ್ಟೆಯ ಮೇಲೆ ಹೆಚ್ಚು ಒತ್ತಡ ಹೇರದೆ ಹಿತವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಒಂದು ಸಣ್ಣ ಪಪ್ಪಾಯಿಯಲ್ಲಿ (ಸುಮಾರು 157 ಗ್ರಾಂ) 2.67 ಗ್ರಾಂ ನಾರಿನಾಂಶವಿರುತ್ತದೆ, ಇದು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.
ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿ ‘ಆಕ್ಟಿನಿಡಿನ್’ (Actinidin) ಎಂಬ ಕಿಣ್ವ ಸಮೃದ್ಧವಾಗಿದೆ. ಇದು ಪಪೈನ್ನಂತೆಯೇ ಪ್ರೋಟೀನ್ಗಳನ್ನು ಜೀರ್ಣಿಸಲು ಸಹಾಯ ಮಾಡುತ್ತದೆ, ಆದರೆ ಇದರ ಕಾರ್ಯಕ್ಷಮತೆ ಸ್ವಲ್ಪ ಪ್ರಬಲವಾಗಿರುತ್ತದೆ. ಕಿವಿ ಹಣ್ಣು ಮಲಬದ್ಧತೆಯನ್ನು ನಿವಾರಿಸಲು ಮತ್ತು ಮನಸ್ಥಿತಿಯನ್ನು (Mood) ಉತ್ತಮಗೊಳಿಸಲು ಸಹಕಾರಿ. ಇದರಲ್ಲಿ ವಿಟಮಿನ್ ಸಿ, ಕೆ ಮತ್ತು ಆಂಟಿಆಕ್ಸಿಡೆಂಟ್ಗಳು ಹೇರಳವಾಗಿವೆ.
ಪಪ್ಪಾಯಿ Vs ಕಿವಿ: ಯಾವುದು ಬೆಸ್ಟ್?
- ದೈನಂದಿನ ಜೀರ್ಣಕ್ರಿಯೆಗೆ: ನೀವು ಪ್ರತಿದಿನದ ಜೀರ್ಣಕ್ರಿಯೆ ಸುಲಭವಾಗಲು ಮತ್ತು ಸೌಮ್ಯವಾದ ಪರಿಹಾರ ಬಯಸುವುದಾದರೆ ಪಪ್ಪಾಯಿ ಉತ್ತಮ.
- ತೀವ್ರ ಮಲಬದ್ಧತೆಗೆ: ದೀರ್ಘಕಾಲದ ಮಲಬದ್ಧತೆ ಅಥವಾ ಅತಿಯಾದ ಪ್ರೋಟೀನ್ ಯುಕ್ತ ಆಹಾರ ಸೇವಿಸಿದ ನಂತರ ಕಿವಿ ಹಣ್ಣು ತಿನ್ನುವುದು ಹೆಚ್ಚು ಪರಿಣಾಮಕಾರಿ.
ಯಾರು ಎಚ್ಚರದಿಂದಿರಬೇಕು?
- ಆಮ್ಲಪಿತ್ತ (Acid Reflux) ಇರುವವರು: ಕಿವಿ ಹಣ್ಣು ಸ್ವಲ್ಪ ಹುಳಿ ಮತ್ತು ಆಮ್ಲೀಯವಾಗಿರುವುದರಿಂದ, ಅಸಿಡಿಟಿ ಸಮಸ್ಯೆ ಇರುವವರಿಗೆ ಇದು ಹೊಟ್ಟೆಯುರಿ ಉಂಟುಮಾಡಬಹುದು.
- ಸೂಕ್ಷ್ಮ ಹೊಟ್ಟೆ: ಕಿವಿ ಹಣ್ಣು ಕೆಲವರಿಗೆ ತುಂಬಾ ಪ್ರಬಲವೆನಿಸಬಹುದು, ಅಂತಹವರು ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಒಳಿತು.
ಗರಿಷ್ಠ ಪ್ರಯೋಜನ ಪಡೆಯಲು ಸಲಹೆಗಳು:
- ಸಮಯ: ಈ ಎರಡೂ ಹಣ್ಣುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.
- ಭೋಜನದ ನಂತರ: ಮಾಂಸಾಹಾರದಂತಹ ಭಾರೀ ಊಟದ ನಂತರ ಜೀರ್ಣಕ್ರಿಯೆಗೆ ಸಹಾಯ ಮಾಡಲು ಪಪ್ಪಾಯಿ ತಿನ್ನಬಹುದು.
- ರಾತ್ರಿ ವೇಳೆ: ಮಲಗುವ ಮುನ್ನ ಈ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ, ಏಕೆಂದರೆ ನಾರಿನಾಂಶ ಮತ್ತು ಕಿಣ್ವಗಳು ನಿದ್ರೆಗೆ ಅಡ್ಡಿಪಡಿಸಬಹುದು.
- ನೀರು: ಕಿಣ್ವಗಳು ಮತ್ತು ಫೈಬರ್ ಸರಿಯಾಗಿ ಕೆಲಸ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯ.
ಒಟ್ಟಾರೆಯಾಗಿ, ನಿಮ್ಮ ಹೊಟ್ಟೆಯ ಸ್ವಭಾವಕ್ಕೆ ಅನುಗುಣವಾಗಿ ಹಣ್ಣನ್ನು ಆಯ್ಕೆ ಮಾಡಿಕೊಳ್ಳಿ. ಪಪ್ಪಾಯಿ ಮತ್ತು ಕಿವಿ ಎರಡೂ ನೈಸರ್ಗಿಕವಾಗಿ ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.
