ಚಿಕ್ಕಮಗಳೂರು: ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ-ಡಿಎಪಿ ರಸಗೊಬ್ಬರವನ್ನು ಅತೀ ಶೀಘ್ರ ವಿತರಣೆ ಮಾಡುವಂತೆ ಆಗ್ರಹಿಸಿ ಇಂದು ಜೆಡಿಎಸ್ ವತಿಯಿಂದ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ರೈತರಿಗೆ ಅಗತ್ಯ ಕೃಷಿ ಪರಿಕರಗಳನ್ನು ಕೂಡಲೇ ಸರಬರಾಜು ಮಾಡುವಂತೆ ಕೃಷಿ ಸಚಿವರನ್ನು ಒತ್ತಾಯಿಸಿದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಜೆಡಿಎಸ್ ಹೋರಾಟ ರೂಪಿಸಲಿದೆ. ಕಾಡು ಪ್ರಾಣಿಗಳು, ಮಾನವ ಸಂಘರ್ಷ ಒಂದೆಡೆಯಾದರೆ, ಕಾಡಾನೆಗಳ ದಾಳಿಗೆ ತುತ್ತಾಗುತ್ತಿರುವ ಕಾರ್ಮಿಕರ ರಕ್ಷಣೆ ಮಾಡಬೇಕು, ಜೊತೆಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರೈತರನ್ನು ಒಕ್ಕಲೆಬ್ಬಿಸುವ ಸಲುವಾಗಿ ಮದಗದ ಕೆರೆ ಬಳಿ ಚಿರತೆ ತಂದುಬಿಟ್ಟು ಅರಣ್ಯ ಇಲಾಖೆ ಆ ಭಾಗದ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ಮುಖಂಡರಾದ ಜಿ.ಹೆಚ್ ಚಂದ್ರಪ್ಪ, ಸಿ.ಕೆ. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.