Wednesday, March 25, 2026
Homeರಾಜಕೀಯಜನರ ಕೆಲಸ ವಿಳಂಬ ಮಾಡುವುದು ಒಂದು ಅಪರಾಧ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಜನರ ಕೆಲಸ ವಿಳಂಬ ಮಾಡುವುದು ಒಂದು ಅಪರಾಧ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಧಿಕಾರಿ ವರ್ಗಕ್ಕೆ ಮಹತ್ವದ ಕರೆ ನೀಡಿದ್ದಾರೆ. ಜನರಿಗೆ ತಲುಪಬೇಕಾದ ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೆ, ಜಾತ್ಯತೀತವಾಗಿ ಮತ್ತು ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕು ಎಂದು ಅವರು ಸೂಚಿಸಿದ್ದಾರೆ. ಗುರುವಾರ (ಜನವರಿ 1, 2026) ಹೊಸ ವರ್ಷದ ಪ್ರಯುಕ್ತ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ರೈತರ ನೆರವಿಗೆ ಆದ್ಯತೆ: ಕಳೆದ 2025ರ ಸಾಲಿನಲ್ಲಿ ರಾಜ್ಯದಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವುದು ಸರ್ಕಾರದ ಮೊದಲ ಕರ್ತವ್ಯ ಎಂದರು. ಈಗಾಗಲೇ ಪ್ರತಿ ಹೆಕ್ಟೇರ್‌ಗೆ 8,500 ರೂ.ಗಳಂತೆ ಬೆಳೆ ಪರಿಹಾರ ನೀಡಲಾಗಿದ್ದು, ಇದರಿಂದ ರೈತರು ತುಸು ನೆಮ್ಮದಿ ಕಾಣುವಂತಾಗಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದರು.

ಸಮಸಮಾಜದತ್ತ ಹೆಜ್ಜೆ: ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ ಎಂದು ಸಿಎಂ ಪ್ರತಿಪಾದಿಸಿದರು. “ನಮ್ಮ ಸರ್ಕಾರ ಸಮಸಮಾಜ ನಿರ್ಮಿಸುವ ಗುರಿ ಹೊಂದಿದೆ. ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳನ್ನು ಮಾಡುವಾಗ ವಿಳಂಬ ನೀತಿ ಅನುಸರಿಸುವುದು ಒಂದು ರೀತಿಯ ಅಪರಾಧವೇ ಸರಿ. ಹೊಸ ವರ್ಷದಲ್ಲಿ ಹೊಸ ಉತ್ಸಾಹದಿಂದ ಕೆಲಸ ಮಾಡಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ,” ಎಂದು ಅವರು ಕರೆ ನೀಡಿದರು.

ಪೊಲೀಸ್ ಇಲಾಖೆಗೆ ಶ್ಲಾಘನೆ: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶ್ರಮಿಸಿದ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು. ಸಂಭ್ರಮಾಚರಣೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡ ಇಲಾಖೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!