Wednesday, February 11, 2026
Homeರಾಜಕೀಯನಕ್ಸಲರ ಜೊತೆ ಸೇರಿದ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ ಆರೋಪ

ನಕ್ಸಲರ ಜೊತೆ ಸೇರಿದ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ ಆರೋಪ

ಕೋಲಾರ: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ತನ್ನ ಹಳಿ ಬದಲಿಸಿಕೊಂಡಿದೆ. ಪ್ರಜಾಪ್ರಭುತ್ವ- ಒಕ್ಕೂಟ ವ್ಯವಸ್ಥೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಒಳಗೆ ಕೆಲಸ ಮಾಡುವುದನ್ನು ಬಿಟ್ಟು ಈಗಾಗಲೇ ನಗರ ನಕ್ಸಲರ ಜೊತೆ ಸೇರಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.


ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ದೇಶದಲ್ಲಿ ನಕ್ಸಲಿಸಂ ಪ್ರಾರಂಭವಾಗಿದ್ದೇ ಕಮ್ಯುನಿಸ್ಟರಿಂದ ಎಂದು ಆರೋಪಿಸಿದರು. ಅದಕ್ಕೆ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದರು ಎಂದು ವಿಶ್ಲೇಷಿಸಿದರು. ಬಳಿಕ ಕಾಂಗ್ರೆಸ್ಸನ್ನೂ ತಿರಸ್ಕಾರ ಮಾಡಿದರು ಎಂದು ನುಡಿದರು. ಕಾಂಗ್ರೆಸ್ ಪಕ್ಷವು ನಗರ ನಕ್ಸಲರ ಜೊತೆ ಸೇರಿ ಕಮ್ಯುನಿಸ್ಟ್ ಕಾಂಗ್ರೆಸ್ ನಗರ ನಕ್ಸಲೈಟ್ ಆಗಿದೆ ಎಂದು ಟೀಕಿಸಿದರು.


ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಆರಂಭಿಸಿ ದೇಶದ ಪ್ರಧಾನಮಂತ್ರಿಯವರೆಗೆ ಒಬ್ಬರನ್ನು ಒಬ್ಬರು ಗೌರವಿಸುವ ವ್ಯವಸ್ಥೆ ಇದೆ. ಇಂಥ ವ್ಯವಸ್ಥೆಯನ್ನು ಮೇಲಿನ ವರ್ಗದಲ್ಲಿರುವ ಪ್ರಧಾನಿಯನ್ನು ಕೂಡ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಾಂವಿಧಾನಿಕವಾಗಿ ನಿಂದಿಸುತ್ತಿದ್ದಾರೆ. ಹೇಡಿ ಎಂಬ ಪದ ಬಳಸುತ್ತಿದ್ದಾರೆ. ಅವರೊಬ್ಬರೇ ಅಲ್ಲ; ಮೋದಿಜೀ ಅವರ ಕಾಲಿನ ದೂಳಿಗೂ ಸಮನಾಗದ ಅವರ ಚೇಲಾಗಳಾದ ಪ್ರಿಯಾಂಕ್ ಖರ್ಗೆಯೂ ಹೇಡಿ ಎನ್ನುತ್ತಾರೆ ಎಂದು ಟೀಕಿಸಿದರು. ಪ್ರಿಯಾಂಕ್ ಖರ್ಗೆ ಅವರ ಅಪ್ಪನ ಹೆಸರು ಪಕ್ಕದಲ್ಲಿ ಇರಲಿಲ್ಲವಾದರೆ ಗ್ರಾಮ ಪಂಚಾಯಿತಿಯಲ್ಲೂ ಅವರು ಗೆಲ್ಲಲಾರರು ಎಂದು ವಿಶ್ಲೇಷಿಸಿದರು.
ಕೋಲಾರ ಚಿನ್ನದ ನಾಡು. ಇದು ಪವಿತ್ರ ಭೂಮಿ. ಈ ಭೂಮಿಯಲ್ಲಿ ಜನ್ಮ ತಾಳಿದ ಎಂಎಲ್‍ಸಿ ನಜೀರ್ ಅಹ್ಮದ್ ಕೂಡ ಪ್ರಧಾನಿಯವರ ಕುರಿತು ಇದೇ ರೀತಿಯ ಪದ ಬಳಸಿದ್ದಾರೆ ಎಂದು ದೂರಿದರು. ದೇಶದ್ರೋಹಿ ಎಂದು ಹೇಳಿದ್ದಾರೆ. ಪ್ರಧಾನಿಯವರನ್ನು ಹೀಗೆ ನಿಂದಿಸುವುದಾದರೆ ಖಂಡಿತವಾಗಿ ಅವರು ಸಂವಿಧಾನಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎಂಬುದೇ ಅದರ ಅರ್ಥ ಎಂದು ತಿಳಿಸಿದರು.

ಅನಿಷ್ಟ ರಾಜಕಾರಣ ಬಿಡಲು ಒತ್ತಾಯ..
ಕಮ್ಯುನಿಸ್ಟರ ಜೊತೆ ಸೇರಿದ ಬಳಿಕ ಅವರ ವೇಷ ಬದಲಾಗಿದೆ. ನಡೆಯೂ ಬದಲಾಗಿದೆ. ಈಗ ಸಂಪೂರ್ಣವಾಗಿ ಅರ್ಬನ್ ನಕ್ಸಲೈಟ್ ರೀತಿಯಲ್ಲಿ ಕಾಂಗ್ರೆಸ್ಸಿನವರು ವರ್ತಿಸುತ್ತಿದ್ದಾರೆ ಎಂಬ ಆಪಾದನೆ ಇದೆ ಎಂದರು. ಮುಖ್ಯಮಂತ್ರಿಗಳು ದೇಶದ ಪ್ರಧಾನಿಯವರನ್ನು ಹೀಗೆ ನಿಂದಿಸಿದ್ದು ಸರಿಯಲ್ಲ ಎಂದು ತಿಳಿಸಿದರು. ನಿಮ್ಮ ಕೇಂದ್ರದ ವಿಪಕ್ಷ ನಾಯಕರಿಂದ ಬೆಂಗಳೂರಿನವರೆಗೆ ಎಲ್ಲರೂ ಒಂದು ಅನಿಷ್ಟ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಸಂವಿಧಾನಾತ್ಮಕ ರಾಜಕಾರಣ ಮಾಡಬೇಕು. ದೇಶದ ಪರಂಪರೆಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ಕ್ಷಮೆ ಕೇಳಬೇಕೆಂದು ಮನವಿ ಮಾಡಿದರು.

ಮಹಾತ್ಮ ಗಾಂಧಿಯವರ ಹೆಸರು ಜೋಡಿಸಿದರು..
ಕೇಂದ್ರ ಸರಕಾರವು ಈಗಾಗಲೇ ವಿಬಿ ಜಿ ರಾಮ್ ಜಿ ಕಾಯ್ದೆಗೆ ಅನುಮೋದನೆ ನೀಡಿದೆ. ಇದು ಗ್ರಾಮೀಣ ಜನರಿಗೆ ಬದುಕು ಕಟ್ಟಿಕೊಡುವ ಕಾಯ್ದೆ. ಈ ಕಾಯ್ದೆಯಲ್ಲಿ ಮೊದಲಿನಿಂದಲೂ ಕೂಡ ಒಮ್ಮೆ ಅದನ್ನು ರೋಜ್‍ಗಾರ್ ಯೋಜನೆ ಎಂದು ಕರೆದಿದ್ದರು. ಅದಾದ ಬಳಿಕ ಪ್ರಧಾನಮಂತ್ರಿ ರೋಜ್‍ಗಾರ್ ಎಂದರು. 1983ರಲ್ಲಿ ಗ್ರಾಮೀಣ ಭೂರಹಿತರ ಉದ್ಯೋಗ ಎಂದರು. 1985ರಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಎಂದಿದ್ದರು. ಅದಾದ ನಂತರ 1989ರಲ್ಲಿ ಜವಾಹರ್ ರೋಜ್‍ಗಾರ್ ಯೋಜನೆ ಎಂದು ಕರೆದರು. 1993 ರಲ್ಲಿ ಉದ್ಯೋಗ ಭರವಸೆ ಯೋಜನೆ ಎಂದು ಕರೆದಿದ್ದರು. ಜವಾಹರ್ ಗ್ರಾಮ ಅಭಿವೃದ್ಧಿ ಯೋಜನೆ ಎಂದು 1999 ರಲ್ಲಿ ಕರೆದರು. 2002ರಲ್ಲಿ ಪರಿಪೂರ್ಣ ರೋಜ್‍ಗಾರ್ ಎಂದು ಕರೆದರೆ, ಬಳಿಕ ಕೂಲಿಗಾಗಿ ಕಾಳು ಎಂದು ಬದಲಿಸಿದರು. 2006ರಲ್ಲಿ ಉದ್ಯೋಗ ಖಾತರಿ ಎಂದು ಕರೆಯಲಾಗಿತ್ತು. 2009ಕ್ಕೆ ಮಹಾತ್ಮ ಗಾಂಧಿಯವರನ್ನು ತಂದು ಅದಕ್ಕೆ ಅಂಟಿಸಿದ್ದರು ಎಂದು ವಿವರಿಸಿದರು.

ಲೂಟಿ, ಯಂತ್ರಗಳಿಂದ ಕೆಲಸ..
ಹಲವು ಸಂದರ್ಭಗಳಲ್ಲಿ ಹೆಸರುಗಳನ್ನು ಸಹಜವಾಗಿ ಬದಲಾವಣೆ ಮಾಡಿದ್ದಾರೆ. ಮೋದಿಜೀ ಅವರು ಈಗ ಅದನ್ನು ಬದಲಾವಣೆ ಮಾಡಿದ್ದಾರೆ. ಮಹಾತ್ಮ ಗಾಂಧಿ ನರೇಗಾ ಎಂದಿತ್ತು. ಹಿಂದೆ ಲೂಟಿ ಮಾಡಲು ಅವಕಾಶ ಇತ್ತು. ಬಡಜನರ ಬದಲಾಗಿ ಯಂತ್ರಗಳಿಂದ ಕೆಲಸ ಮಾಡಿಸಲಾಗುತ್ತಿತ್ತು. ಯಂತ್ರಗಳೆಂದರೆ ಬಡವರೇ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ಎಂಬುದು ಮಹಾತ್ಮ ಗಾಂಧೀಜಿಯವರ ಹೆಸರಿಗೇ ಕಳಂಕ
ಬಡವರ ಪಟ್ಟಿ ಮಾಡಿ ಖಾತೆ ತೆರೆದು ಅವರ ಡೆಬಿಟ್ ಕಾರ್ಡ್ ಕಿಸೆಯಲ್ಲಿಟ್ಟು, ನಗದು ಬಂದ ಬಳಿಕ ಪಡೆಯುತ್ತಿದ್ದರು. ಈ ರೀತಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದುದು ಸ್ಪಷ್ಟವಾದ ಬಳಿಕ ಭ್ರಷ್ಟಾಚಾರ ತಪ್ಪಿಸಲು ಮುಂದಾಗಿದ್ದಾರೆ. ಭ್ರಷ್ಟಾಚಾರ ಎಂಬುದು ಮಹಾತ್ಮ ಗಾಂಧೀಜಿಯವರ ಹೆಸರಿಗೇ ಕಳಂಕ ಎಂದು ವಿಶ್ಲೇಷಿಸಿದರು. ಅಸಲಿ ಗಾಂಧಿ ಹೆಸರಿನಲ್ಲಿ ನಕಲಿ ಗಾಂಧಿಗಳ ಲೂಟಿ ಎಂದು ಆರೋಪಿಸಿದರು.
ಇದೇ ಕೋಲಾರದ ಶ್ರೀನಿವಾಸಪುರದಲ್ಲಿ ಲೋಕಾಯುಕ್ತರು ಬಂದು 25 ಕೇಸ್ ಹಾಕಿದ್ದರು. ದೇಶದ ಎಐಸಿಸಿ ಅಧ್ಯಕ್ಷರ ಊರು ಯಾದಗಿರಿ- ಗುಲ್ಬರ್ಗದಲ್ಲಿ ಮಹಿಳೆಯರಿಗೆ ಕೆಲಸ ಕೊಡಬೇಕೆಂದು ಹೇಳಿದರೆ, ಗಂಡಸರೇ ಸೀರೆ ಉಟ್ಟು ಹಣ ಪಡೆದಿದ್ದಾರೆ ಎಂದು ಟೀಕಿಸಿದರು. ಇಂಥವೆಲ್ಲ ಯಾಕೆ ಬೇಕಿತ್ತು ಎಂದು ಕೇಳಿದರು.

ರಾಮೋದ್ಭವ ಆದುದನ್ನು ಗಮನಿಸಿ ಕಾಂಗ್ರೆಸ್ಸಿಗೆ ಜ್ವರ
ಈಗ ವಿಕಸಿತ ಭಾರತ್ ಗ್ಯಾರಂಟಿ ಅಜೀವಿಕಾ ಮಿಷನ್ ಗ್ರಾಮೀಣ ಎಂದು ಮಾಡಿದ್ದು, ಇದನ್ನು ಕೂಡಿಸಿದರೆ ವಿಬಿ ಜಿ ರಾಮ್ ಜಿ ಆಗಿದೆ. ಇಲ್ಲಿ ರಾಮೋದ್ಭವ ಆದುದನ್ನು ಗಮನಿಸಿ ಕಾಂಗ್ರೆಸ್ಸಿಗೆ ಜ್ವರ ಬಂದಿದೆ ಎಂದು ತಿಳಿಸಿದರು. ಇಷ್ಟಕ್ಕಾಗಿ ಕಾಂಗ್ರೆಸ್ ಹೈಕಮಾಂಡನ್ನು ಖುಷಿಪಡಿಸಲು ಒಂದು ವಿಶೇಷ ಅಧಿವೇಶನ ಕರೆದಿದ್ದರು. ಜಿ ರಾಮ್ ಜಿ ಬೇಕಾಗಿಲ್ಲ; ಮತ್ತೆ ನರೇಗಾ ಎಂದು ಹೇಳಲು ನಿರ್ಣಯ ಮಾಡಿದ್ದಾರೆ. ನರೇಗಾದಲ್ಲಿ 100 ದಿನಗಳ ಖಾತರಿ ಕೆಲಸದ ಬದಲು ನಾವು 125 ದಿನ ಕೆಲಸ ಕೊಟ್ಟಿದ್ದೇವೆ. ನಿಮಗ್ಯಾಕೆ ಬೆಂಕಿ ಬೀಳಬೇಕು ಎಂದು ಕೇಳಿದರು.
ಮೂರು ತಿಂಗಳಿಗೋ ಆರು ತಿಂಗಳಿಗೋ ಹಣ ಬರುತ್ತಿತ್ತು. 7ರಿಂದ 14 ದಿನದಲ್ಲಿ ಹಣ ಕೊಡಬೇಕೆಂದು ನಾವು ಮಾಡಿದ್ದೇವೆ. ಅದಕ್ಕೆ ನಿಮಗ್ಯಾಕೆ ಬೆಂಕಿ ಬೀಳಬೇಕು ಎಂದು ಪ್ರಶ್ನೆಯನ್ನು ಮುಂದಿಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!