ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಾಲಿದಾ ಜಿಯಾ (80) ಅವರು ಮಂಗಳವಾರ ಢಾಕಾದಲ್ಲಿ ನಿಧನರಾಗಿದ್ದಾರೆ.ಈ ಮೂಲಕ ಒಂದು ಸುದೀರ್ಘ ರಾಜಕೀಯ ಯುಗ ಅಂತ್ಯಗೊಂಡಿದೆ.
ಖಾಲಿದಾ ಜಿಯಾ ಅವರ ಜೀವನವು ಕೇವಲ ರಾಜಕೀಯ ಪಯಣವಾಗಿರಲಿಲ್ಲ, ಅದು ಒಬ್ಬ ಗೃಹಿಣಿಯಿಂದ ದೇಶದ ಅತ್ಯುನ್ನತ ನಾಯಕಿಯಾಗಿ ಬೆಳೆದ ರೋಚಕ ಕಥೆ. 1960ರಲ್ಲಿ ಪಾಕಿಸ್ತಾನದ ಸೇನಾ ಅಧಿಕಾರಿ ಜಿಯಾವುರ್ ರೆಹಮಾನ್ ಅವರನ್ನು ವಿವಾಹವಾದಾಗ, ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ 1981ರಲ್ಲಿ ಸೇನಾ ದಂಗೆಯಲ್ಲಿ ಪತಿಯ ಹತ್ಯೆಯಾದಾಗ, ಬಿಕ್ಕಟ್ಟಿನಲ್ಲಿದ್ದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯನ್ನು (BNP) ಮುನ್ನಡೆಸಲು ಅವರು ಅನಿವಾರ್ಯವಾಗಿ ಅಂಗಳಕ್ಕೆ ಇಳಿದರು.
1991ರಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಬಾಂಗ್ಲಾದೇಶದ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರಕ್ಕೇರಿದರು. ನಂತರದ ದಶಕಗಳಲ್ಲಿ ಶೇಖ್ ಹಸೀನಾ ಮತ್ತು ಖಾಲಿದಾ ಜಿಯಾ ನಡುವಿನ ಶೀತಲ ಸಮರವು ಇಡೀ ಜಗತ್ತಿನ ಗಮನ ಸೆಳೆದಿತ್ತು. ಈ ಇಬ್ಬರು ನಾಯಕಿಯರನ್ನು ಜಗತ್ತು ‘ಬ್ಯಾಟಲಿಂಗ್ ಬೇಗಂಸ್’ ಎಂದೇ ಗುರುತಿಸಿತ್ತು.
ಕಳೆದ ಒಂದು ದಶಕವು ಅವರ ಪಾಲಿಗೆ ಅತ್ಯಂತ ಕಷ್ಟಕರವಾಗಿತ್ತು. ಭ್ರಷ್ಟಾಚಾರದ ಆರೋಪಗಳ ಮೇಲೆ ಜೈಲು ಶಿಕ್ಷೆ ಅನುಭವಿಸಿದ ಅವರು, ಲಿವರ್ ಸಿರೋಸಿಸ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ತೀವ್ರವಾಗಿ ಬಳಲುತ್ತಿದ್ದರು. ಆದರೆ 2024ರಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡು ದೇಶದಲ್ಲಿ ಆದ ಬದಲಾವಣೆಗಳು ಅವರಿಗೆ ಹೊಸ ಭರವಸೆ ನೀಡಿದ್ದವು. 2025ರ ಆರಂಭದಲ್ಲಿ ಸುಪ್ರೀಂ ಕೋರ್ಟ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದಾಗ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು.
ಇಂದು ಮುಂಜಾನೆ ಢಾಕಾದ ಎವರ್‌ಕೇರ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಾಗ, ಲಂಡನ್‌ನಿಂದ ವಾಪಸ್ಸಾಗಿದ್ದ ಅವರ ಪುತ್ರ ತಾರಿಕ್ ರೆಹಮಾನ್ ಜೊತೆಗಿದ್ದರು. ಅವರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ಕಂಬನಿ ಮಿಡಿದಿದ್ದು, ಬಾಂಗ್ಲಾದೇಶವು ಒಬ್ಬ ದಿಟ್ಟ ನಾಯಕಿಯನ್ನು ಕಳೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ. ಬಾಂಗ್ಲಾದೇಶ ಸರ್ಕಾರವು ಅವರ ಗೌರವಾರ್ಥ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
