ಹಾಸನ: ಮೊದಲ ಹಂತದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹದಿನೈದು ದಿನ ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಪರ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಭವಾನಿ ರೇವಣ್ಣ ಹಾಗೂ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಹಾಸನದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವಿರುದ್ಧ ಬಹು ಮತದ ಅಂತರದಲ್ಲಿ ಪ್ರಜ್ವಲ್ ರೇವಣ್ಣ ಜಯ ಸಾಧಿಸಬೇಕೆಂದು ಹೆಚ್ ಡಿ ಡಿ ಕುಟುಂಬಸ್ಥರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ನಗರದಲ್ಲಿ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಸಭೆ ನಡೆಸಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಪರ ಮತಯಾಚನೆ ಮಾಡಲಿದ್ದಾರೆ.
ಹೆಚ್ ಡಿಡಿ ಮಧ್ಯಾಹ್ನ 12 ಗಂಟೆ ಹೊಳೆನರಸೀಪುರ ತಾಲ್ಲೂಕಿನ, ಬಾಗೇವಾಳು ಹಾಗೂ ಸಂಜೆ 6 ಗಂಟೆಗೆ ಮಳಲಿ ಗ್ರಾಮದ ಸುತ್ತಮುತ್ತ ಮತಯಾಚಿಸಲಿದ್ದಾರೆ. ಬಳಿಕ ಹುಟ್ಟೂರು ಹರದನಹಳ್ಳಿ ಗ್ರಾಮದಲ್ಲಿ ಹೆಚ್.ಡಿ.ದೇವೇಗೌಡರು ವಾಸ್ತವ್ಯ ಹೂಡಲಿದ್ದಾರೆ.
ಇನ್ನೊಂದೆಡೆ ಅರಕಲಗೂಡು ತಾಲ್ಲೂಕಿನ, ರಾಮನಾಥಪುರಕ್ಕೆ ಮಾಜಿಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿ ಬೆ.11 ಗಂಟೆಗೆ ರಾಮನಾಥಪುರದ ಪಟ್ಟಾಭಿರಾಮ ಶಾಲೆಯ ಆವರಣದಲ್ಲಿ ನ್‌ಡಿಎ ಅಭ್ಯರ್ಥಿ, ಸಹೋದರನ ಪುತ್ರ ಪ್ರಜ್ವಲ್‌ರೇವಣ್ಣ ಪರ ಮತಯಾಚಿಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಬಿಡದಿ ತೋಟದ ಮನೆಗೆ ತೆರಳಲಿದ್ದಾರೆ ಮೂಲಗಳು ತಿಳಿಸಿವೆ.
ಯಾವುದೇ ಕಾರಣಕ್ಕೂ ಹೆಚ್ ಡಿಡಿ ಭದ್ರಕೋಟೆಯಲ್ಲಿ ಜೆಡಿಎಸ್ ಸೋಲಬಾರದೆಂದು ಒಂದೆಡೆ ಭವಾನಿ ರೇವಣ್ಣ ಪ್ರಚಾರ ಮಾಡುತ್ತಿದ್ದರೇ ಇನ್ನೊಂದೆಡೆ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಪರ ಪ್ರಚಾರ ಮಾಡುತ್ತಿದ್ದಾರೆ.
-ಕಾವ್ಯಶ್ರೀ ಕಲ್ಮನೆ