ನವದೆಹಲಿ : ಬಳ್ಳಾರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡವಳಿಕೆಯನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲು ಡಿಸಿಎಂ ಅವರಿಗೆ ಅಧಿಕಾರ ಕೊಟ್ಟವರು ಯಾರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ?” ಎಂದು ಖಾರವಾಗಿ ಪ್ರಶ್ನಿಸಿದರು.
ಗೃಹ ಇಲಾಖೆಯಲ್ಲಿ ಡಿಸಿಎಂ ಹಸ್ತಕ್ಷೇಪವೇಕೆ?
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದನ್ನು ಪ್ರಶ್ನಿಸಿದ ಕುಮಾರಸ್ವಾಮಿ, “ಗೃಹ ಸಚಿವರು ಇರುವಾಗ ಡಿಸಿಎಂ ಅವರ ಹಸ್ತಕ್ಷೇಪ ಯಾಕೆ? ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯ ಮುಂದೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ಶಾಸಕರ ವಿರುದ್ಧ ದೂರು ನೀಡಿದ್ದಾರೆ. ಹೀಗಿರುವಾಗ ನಿಮ್ಮ ತನಿಖೆಯ ಹಣೆಬರಹ ಏನಾಗಬಹುದು?” ಎಂದು ವ್ಯಂಗ್ಯವಾಡಿದರು. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮರಣೋತ್ತರ ಪರೀಕ್ಷೆಯ ಬಗ್ಗೆ ಅನುಮಾನ
ಬಳ್ಳಾರಿ ಬಿಮ್ಸ್ನಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಬಗ್ಗೆ ಗಂಭೀರ ಶಂಕೆ ವ್ಯಕ್ತಪಡಿಸಿದ ಸಚಿವರು, “ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ವೈದ್ಯರು ಪರೀಕ್ಷೆ ಮಾಡುತ್ತಿರುವಾಗ ಮತ್ತೊಬ್ಬ ವೈದ್ಯರನ್ನು ಕರೆಸಿದ್ದೇಕೆ? ಯಾರನ್ನು ರಕ್ಷಿಸಲು ಈ ಒತ್ತಡ ಹೇರಲಾಯಿತು? ಕುಟುಂಬದವರಿಗೆ ಅಂತಿಮ ವಿಧಿವಿಧಾನಕ್ಕೂ ಅವಕಾಶ ನೀಡದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟಿದ್ದೇಕೆ?” ಎಂದು ಪ್ರಶ್ನಿಸಿದರು. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ತಕ್ಷಣವೇ ಸಿಬಿಐ (CBI) ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆ ಮತ್ತು ಪರಮೇಶ್ವರ್ ಅವರಿಗೆ ತಿರುಗೇಟು
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದ ಕುಮಾರಸ್ವಾಮಿ, “ಮೊದಲು ನಿಮ್ಮ ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನೋಡಿ. ಕರ್ನಾಟಕವನ್ನು ಜಂಗಲ್ ರಾಜ್ಯ ಮಾಡಲಾಗುತ್ತಿದೆ, ಈ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿರುವುದೇಕೆ?” ಎಂದರು. ಗೃಹ ಸಚಿವ ಪರಮೇಶ್ವರ್ ಅವರಿಗೆ ‘ನಕಲಿ ಶಾಂತಿಯ ಮಾತು ನಿಲ್ಲಿಸಿ’ ಎಂದು ತರಾಟೆಗೆ ತೆಗೆದುಕೊಂಡ ಅವರು, ಪೊಲೀಸರ ಕೈ ಕಟ್ಟಿ ಹಾಕಿದವರು ಯಾರು ಎಂಬುದು ಜನರಿಗೆ ತಿಳಿಯಬೇಕು ಎಂದರು.
ಸತ್ಯ ಹೇಳಲು ರಾಗದ್ವೇಷ ಬೇಕಿಲ್ಲ
ಜನಾರ್ದನ ರೆಡ್ಡಿ ಅವರೊಂದಿಗಿನ ಹಳೆಯ ವೈಷಮ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಮತ್ತು ರೆಡ್ಡಿ ನಡುವಿನ ಗಲಾಟೆ ಹಳೆಯ ಕಥೆ. ನಾನು ಯಾವುದೇ ರಾಗದ್ವೇಷ ಇಲ್ಲದೆ ಸತ್ಯ ಹೇಳುತ್ತಿದ್ದೇನೆ. ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ. ಪೊಲೀಸರು ಮನಸ್ಸು ಮಾಡಿದ್ದರೆ ಐದು ನಿಮಿಷದಲ್ಲಿ ಗುಂಪನ್ನು ಚದುರಿಸಬಹುದಿತ್ತು, ಆದರೆ ಯಾರ ಆದೇಶದ ಮೇರೆಗೆ ಅವರು ಸುಮ್ಮನಿದ್ದರು?” ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದರು.
