Thursday, February 26, 2026
Homeರಾಜಕೀಯಒಳ ಮೀಸಲಾತಿಯಿಂದ ಉದ್ಯೋಗ ಕೊಡಲು ಆಗಿಲ್ಲ, ಹಂತ ಹಂತವಾಗಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡ್ತೀವಿ-ಸಿಎಂ

ಒಳ ಮೀಸಲಾತಿಯಿಂದ ಉದ್ಯೋಗ ಕೊಡಲು ಆಗಿಲ್ಲ, ಹಂತ ಹಂತವಾಗಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡ್ತೀವಿ-ಸಿಎಂ

ಉಡುಪಿ: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಉದ್ಯೋಗ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆಗಳು ವೇಗ ಪಡೆಯಲಿವೆ ಎಂದು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರೆಶ್ನೆಗಳಿಗೆ ಉತ್ತರಿಸಿದರು.

ನೇಮಕಾತಿ ವಿಳಂಬಕ್ಕೆ ಕಾರಣ ಮತ್ತು ಮುಂದಿನ ಹಾದಿ:
ಕಳೆದ ಕೆಲವು ಸಮಯದಿಂದ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿಗಳು, ಒಳಮೀಸಲಾತಿಗೆ ಸಂಬಂಧಿಸಿದ ಕಾನೂನಾತ್ಮಕ ಪ್ರಕ್ರಿಯೆಗಳಿಂದಾಗಿ ಪ್ರಕ್ರಿಯೆಗಳು ತಡವಾಗಿದ್ದವು. ಆದರೆ ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತಿದ್ದು, ಪ್ರಸ್ತುತ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಇದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಆಶಾಕಿರಣ ಮೂಡಿಸಿದೆ.

ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ಬ್ಯಾರಿಕೇಡ್ ನಿರ್ಮಾಣ:
ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆನೆ, ಚಿರತೆ ಮತ್ತು ಹುಲಿಗಳ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಾಗಿರುವುದು ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದರು. ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ತಡೆಯಲು ಕಾಡಿನ ಅಂಚಿನಲ್ಲಿ ಬೃಹತ್ ಪ್ರಮಾಣದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ರೈತರ ಬೆಳೆ ಮತ್ತು ಜನರ ಪ್ರಾಣ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮಾದಕ ದ್ರವ್ಯ ನಿಗ್ರಹ ಮತ್ತು ಕಾನೂನು ಸುವ್ಯವಸ್ಥೆ:
ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಪಿಡುಗನ್ನು ರಾಜ್ಯದಿಂದ ಸಂಪೂರ್ಣವಾಗಿ ಕಿತ್ತೆಸೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಜೊತೆಗೆ, ಯಾವುದೇ ಸಂಘಟನೆಗಳು ಕಾನೂನಿನ ವಿರುದ್ಧವಾಗಿ ನಡೆದುಕೊಂಡಲ್ಲಿ ಅಥವಾ ಶಾಂತಿ ಭಂಗ ಉಂಟುಮಾಡಿದಲ್ಲಿ ಅವರ ವಿರುದ್ಧ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿಯ ಸಮತೋಲನ:
ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಈವರೆಗೆ ಗ್ಯಾರಂಟಿಗಳಿಗಾಗಿ 1,20,000 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ವಾರ್ಷಿಕವಾಗಿ 52,000 ಕೋಟಿ ರೂ.ಗಳನ್ನು ಈ ಯೋಜನೆಗಳಿಗೆ ವೆಚ್ಚ ಮಾಡುತ್ತಿದ್ದರೂ ಸಹ, ರಾಜ್ಯದ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗದಂತೆ ಮುಂದುವರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆಗುಂಬೆ ಸುರಂಗ ಮಾರ್ಗ ಮತ್ತು ಪರಶುರಾಮ ಥೀಂ ಪಾರ್ಕ್:
ಮಲೆನಾಡಿನ ಪ್ರಮುಖ ಕೊಂಡಿಯಾದ ಆಗುಂಬೆ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಸರವಾದಿಗಳೊಂದಿಗೆ ಚರ್ಚೆ ನಡೆಸಿ, ಅಗತ್ಯ ಅನುಮತಿಗಳನ್ನು ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಇನ್ನು ಕಾರ್ಕಳದ ಬಹುಚರ್ಚಿತ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಯೋಜನೆಯನ್ನು ಸದ್ಯದಲ್ಲೇ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು.

ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಶಾಸಕರು ಸಚಿವರಾಗಲು ಬಯಸುವುದು ತಪ್ಪಲ್ಲ. ಆದರೆ ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಪದವಿ ನೀಡಬಾರದೆಂಬ ನಿರ್ಣಯವನ್ನು ಪಕ್ಷ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!