Friday, February 13, 2026
Homeರಾಜಕೀಯಕೆಳಚಂದ್ರ ಕೌಶಲ್ಯ ತರಬೇತಿ ಕೇಂದ್ರದಿಂದ ಸ್ವಾವಲಂಬಿ ಬದುಕಿಗೆ ದಾರಿ: ಸುಜಾ ಕೆ.ಜೆ.ಜಾರ್ಜ್

ಕೆಳಚಂದ್ರ ಕೌಶಲ್ಯ ತರಬೇತಿ ಕೇಂದ್ರದಿಂದ ಸ್ವಾವಲಂಬಿ ಬದುಕಿಗೆ ದಾರಿ: ಸುಜಾ ಕೆ.ಜೆ.ಜಾರ್ಜ್

ಬೆಂಗಳೂರು: : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ಯುವ ಸಮುದಾಯಕ್ಕೆ ಕೌಶಲ್ಯ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹೋನ್ನತ ಕಾರ್ಯವನ್ನು ಕ್ಷೇತ್ರದ ಶಾಸಕರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಕೆಳಚಂದ್ರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಸುಜಾ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಜೀವನಹಳ್ಳಿಯಲ್ಲಿರುವ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಕೌಶಲ್ಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಗುರುವಾರ ಪ್ರಮಾಣಪತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಸುಜಾ ಕೆ.ಜೆ.ಜಾರ್ಜ್, “ಈ ಕೌಶಲ್ಯ ಅಭಿವೃದ್ಧಿ ಕೇಂದ್ರವು ಸಚಿವರಾದ ಕೆ.ಜೆ. ಜಾರ್ಜ್ ಮತ್ತು ರಾಣಾ ಜಾರ್ಜ್ ಅವರ ದೂರದೃಷ್ಟಿಯ ಯೋಜನೆಯಾಗಿದ್ದು, ಈ ಮೂಲಕ ಯುವ ಸಮುದಾಯವನ್ನು ಸಬಲೀಕರಣಗೊಳಿಸುತ್ತಿದೆ,” ಎಂದರು.

“ಕೆಳಚಂದ್ರ ಫೌಂಡೇಷನ್ ನ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮೂಲಕ ತರಬೇತಿ ನೀಡುವುದು ಮಾತ್ರವಲ್ಲದೆ, ಆರೋಗ್ಯ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲೂ ಕ್ಷೇತ್ರದ ಜನರಿಗೆ ವಿವಿಧ ಸೇವೆ, ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಮಾಜಕ್ಕೆ ಸಹಾಯ ಮಾಡುವುದನ್ನು ನೋಡಿದಾಗ ನನಗೆ ಅಪಾರ ಸಂತೋಷವಾಗುತ್ತದೆ. ಅದೇ ರೀತಿ ಕ್ಷೇತ್ರದ ಜನರು ಇದರ ಅನುಕೂಲ ಪಡೆಯುತ್ತಿರುವುದರಿಂದ ನಮ್ಮ ಕುಟುಂಬಕ್ಕೂ ಸಂತೋಷ,” ಎಂದು ತಿಳಿಸಿದರು.

“ಈ ಮೂರು ತಿಂಗಳ ತರಬೇತಿಯಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹೊಸತನ್ನು ಕಲಿಯುವಾಗ ಹೊಸ ಕೌಶಲ್ಯದೊಂದಿಗೆ ಹೊಸ ಸ್ನೇಹಿತರನ್ನೂ ಹೊಂದಿ ನಿಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ಯುವ ಸಮುದಾಯ ಮಾದಕ ವ್ಯಸನಗಳಿಗೆ ಬಲಿಯಾಗದೆ ಕೌಶಲ್ಯ ಹೊಂದುವ ಮೂಲಕ ಕುಟುಂಬನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು,” ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಕೊಡುಗೆ:
“ಕೆಳಚಂದ್ರ ಫೌಂಡೇಷನ್ ಆರೋಗ್ಯ ಕ್ಷೇತ್ರಕ್ಕೆ ದಾಖಲೆ ಎನ್ನಬಹುದಾದ ಕೊಡುಗೆ ನೀಡಿದೆ. ಇಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ 2014 ರಿಂದ ಈವರೆಗೆ 38,000 ಕ್ಕೂ ಹೆಚ್ಚು ಉಚಿತ ಡಯಾಲಿಸಿಸ್ ಗಳನ್ನು ಮಾಡಲಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ 1.1 ಲಕ್ಷಕ್ಕೂ ಹೆಚ್ಚು ಆರೋಗ್ಯ ಸಮಾಲೋಚನೆಗಳನ್ನು ಒದಗಿಸಲಾಗಿದೆ. 1.20 ಲಕ್ಷಕ್ಕೂ ಹೆಚ್ಚು ನಾಗರಿಕರು ನಮ್ಮ ಲ್ಯಾಬ್ ಮತ್ತು ಉಚಿತ ಔಷಧ ಸೌಲಭ್ಯ ಪಡೆದಿದ್ದಾರೆ. 30,000 ಕ್ಕೂ ಹೆಚ್ಚು ನೋಂದಾಯಿತ ಹೊರರೋಗಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಸಮುದಾಯ ಆರೋಗ್ಯ ಸಹಾಯಕರು 80,000ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಕುಟುಂಬಗಳಿಗೆ ಆರೋಗ್ಯ ರಕ್ಷಣೆ, ಪಿಂಚಣಿ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ,” ಎಂದು ಸುಜಾ ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.

“ಆರೋಗ್ಯ ಮಾತ್ರವಲ್ಲದೆ ಕಂಪ್ಯೂಟರ್‌ ತರಬೇತಿ, ಟೈಲರಿಂಗ್, ಕರಕುಶಲ ವಸ್ತುಗಳು ಮತ್ತು ಆಭರಣ ತಯಾರಿಕೆಯಲ್ಲಿ 1600ಕ್ಕೂ ಹೆಚ್ಚು ಮಹಿಳೆಯರು ಕೌಶಲ್ಯ ಪಡೆದಿದ್ದಾರೆ, ಡೇಟಾ ಎಂಟ್ರಿ, ಎಲೆಕ್ಟ್ರೀಷಿಯನ್ ಕೆಲಸ ಮತ್ತು ಮೊಬೈಲ್ ರಿಪೇರಿಗಳಲ್ಲಿ 800ಕ್ಕೂ ಹೆಚ್ಚು ಯುವಕರು ತರಬೇತಿ ಹೊಂದಿದ್ದಾರೆ. ಇದಲ್ಲೆ, ಶಾಲೆಗಳು, ಆಟದ ಮೈದಾನಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಶಿಕ್ಷಣ ಮತ್ತು ಕ್ರೀಡೆಗೂ ಆದ್ಯತೆ ನೀಡಲಾಗಿದೆ. ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಹಸಿರೀಕರಣಕ್ಕೆ ಒತ್ತು ನೀಡಲಾಗುತ್ತಿದೆ,” ಎಂದರು.

ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಪುಲಿಕೇಶಿ, ಮಾರುತಿ ಸೇವಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘ ದೇವರಾಜ್, ಜೀವನಹಳ್ಳಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಯೋಜಕಿ ಲತಾ ಗಣೇಶ್, ಕೆ.ಜಿ. ಹಳ್ಳಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಯೋಜಕಿ ಡಾ. ತ್ರಿವೇಣಿ, ಸಚಿವ ಕೆ.ಜೆ.ಜಾರ್ಜ್ ಅವರ ರಾಜಕೀಯ ಕಾರ್ಯದರ್ಶಿ ಮೆನನ್ ಮತ್ತಿತರರು ಪಾಲ್ಗೊಂಡಿದ್ದರು.

ಕೆಳಚಂದ್ರ ಫೌಂಡೇಷನ್ ನಿಂದ ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಜನರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ವಜ್ಞನಗರ ಕ್ಷೇತ್ರದ ಜನರನ್ನು ಸುಶಿಕ್ಷತರು, ಆರೋಗ್ಯವಂತರು ಮತ್ತು ಕೌಶಲ್ಯವಂತರನ್ನಾಗಿ ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಆ ಮೂಲಕ ಸರ್ವಜ್ಞನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲಾಗುತ್ತಿದೆ. ಅದರ ಒಂದು ಭಾಗವಾಗಿ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿ, ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!